×
Ad

ಮಲ್ಪೆ: ಬೀಚ್‌ನಲ್ಲಿ ಪ್ರವಾಸಿಗರನ್ನು ರಂಜಿಸುತಿದ್ದ ‘ಬಾಹುಬಲಿ’ ಸಾವು

Update: 2018-07-13 22:23 IST

ಉಡುಪಿ, ಜು.13: ಮಲ್ಪೆ ಬೀಚಿನಲ್ಲಿ ಪ್ರವಾಸಿಗರ ಮನತಣಿಸುತ್ತಿದ್ದ ‘ಬಾಹುಬಲಿ’ ಹೆಸರಿನ ಗಂಡು ಒಂಟೆ, ಶುಕ್ರವಾರ ಮಧ್ಯಾಹ್ನ ಇದ್ದಕಿದ್ದಂತೆ ಸಾವನಪ್ಪಿದ್ದೆ.

ಮಧ್ಯಪ್ರದೇಶದ ಬಡಲಾನಿ ಜಿಲ್ಲೆಯ ಶತ್ರುಘ್ನ ಬಾಬುರಾವ್ ಎಂಬವರು ಕಳೆದ 10 ವರ್ಷಗಳಿಂದ ಒಂಟೆ ಸವಾರಿಗಾಗಿ ಮೂರು ಗಂಡು ಒಂಟೆಗಳನ್ನು ಮಲ್ಪೆ ಬೀಚಿನಲ್ಲಿ ವ್ಯವಸ್ಥೆಗೊಳಿಸಿದ್ದರು. ಕಟ್ಟಪ್ಪ(14ವ), ಬಾಹುಬಲಿ (10), ರಾಣಾ(8) ಹೆಸರಿನ ಮೂರು ಒಂಟೆಗಳು ಬೀಚಿನಲ್ಲಿ ಸೇರುವ ಪ್ರವಾಸಿಗರನ್ನು ಬೆನ್ನ ಮೇಲೆ ಹೊತ್ತು, ಕಡಲ ತಡಿಯ ಮರಳ ರಾಶಿಯಲ್ಲಿ ಸುತ್ತಾಡಿಸಿ, ಮನ ತಣಿಸುತ್ತಿದ್ದವು.

ಇವುಗಳಲ್ಲಿ ಶುಕ್ರವಾರ ಮಧ್ಯಾಹ್ನ ಗಿಡಗಂಟಿ ಬೆಳೆದ ಜಾಗದಲ್ಲಿ ಮೇಯಲು ಬಿಟ್ಟಿದ ಬಾಹುಬಲಿ ಹೆಸರಿನ 10 ವರ್ಷದ ಒಂಟೆ ಇದ್ದಕ್ಕಿದ್ದಂತೆ ಬಿದ್ದು ಒದ್ದಾಡಿ ಸಾವನಪ್ಪಿದೆ. ಒಂಟೆಯ ಮಾಲಿಕ ಶತ್ರುಘ್ನ ಬಾಬುರಾವ್ ಅವರು ಒಂಟೆ ಸಾವಿಗೆ ಹೃದಯಾಘಾತ ಕಾರಣ ಇರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಹತ್ತು ತಿಂಗಳ ಹಿಂದೆ ಬಾಹುಬಲಿ ಒಂಟೆಯನ್ನು 1.20 ಲಕ್ಷ ರೂ. ಹಣ ಕೊಟ್ಟು ಮಧ್ಯಪ್ರದೇಶ ದಲ್ಲಿ ಖರೀದಿಸಿದ್ದೆ ಎಂದು ಮಾಲಿಕರು ಹೇಳಿದ್ದಾರೆ.

ಸುಮಾರು 900 ಕೆ.ಜಿ. ಭಾರದ, 7 ಅಡಿ ಎತ್ತರದ ಒಂಟೆಯ ಕಳೇಬರವನ್ನು ವಿಲೇವಾರಿಗೊಳಿಸಲು ಮಾಲಕ  ಶತ್ರಘ್ನನಿಗೆ ಸಮಸ್ಯೆ ಎದುರಾಗಿದೆ. ಉಡುಪಿ ಯ ಸಾಮಾಜಿಕ ಕಾರ್ಯಕರ್ತರು ಈತ ಅಳಲಿಗೆ ಸ್ಪಂದಿಸಿ ಒಂಟೆ ಕಳೇಬರದ ವಿಲೇವಾರಿಗೊಳಿಸಲು ಸಹಕರಿಸಿದರೆಂದು ತಿಳಿದುಬಂದಿದೆ.

ಕುಟುಂಬಕ್ಕೆ ಆದಾಯ ಮೂಲವಾಗಿದ್ದ ಒಂಟೆ ಬಾಹುಬಲಿಯ ಹಠಾತ್ತ್ ಸಾವಿನಿಂದ ದಿಕ್ಕು ಕಾಣದೆ ಅಸಹಾಯಕ ಸ್ಥಿತಿಯಲ್ಲಿದ್ದ ಶತ್ರುಘ್ನನ ನೆರವಿಗೆ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹಾಗೂ ಸ್ಥಳಿಯರಾದ ಗಣೇಶ್ ಮೆಂಡನ್, ಮಂಜುನಾಥ್,ದಯಾನಂದ ಕೊಳ ನೆರವಿಗೆ ಬಂದು, ಕ್ರೇನ್‌ನ್ನು ತಂದು ಕಳೇಬರದ ವಿಲೇವಾರಿಗೆ ವ್ಯವಸ್ಥೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News