ತೂತುಕುಡಿ ಪೊಲೀಸ್ ಗೋಲಿಬಾರನ್ನು ಜಲಿಯನ್‌ವಾಲಾ ಬಾಗ್‌ಗೆ ಹೋಲಿಸಿದ ಸೆಟಲ್ವಾಡ್

Update: 2018-07-13 17:06 GMT

ಚೆನ್ನೈ, ಜು.13: ಹದಿಮೂರು ಜನರನ್ನು ಬಲಿಪಡೆದ ತೂತುಕುಡಿ ಪೊಲೀಸ್ ಗೋಲಿಬಾರ್ ಪ್ರಕರಣವನ್ನು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಇಂಥ ಘಟನೆಗಳ ಬಗ್ಗೆ ನ್ಯಾಯಾಲಯಗಳು ಖುದ್ದಾಗಿ ಗಣನೆಗೆ ತೆಗೆದುಕೊಳ್ಳುವ ಮೂಲಕ ಭವಿಷಯದಲ್ಲಿ ಇಂಥವುಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ದೇಶದ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯ ತಮ್ಮ ಬಳಿಯಿರುವ ಪ್ರಬಲ ಅಸ್ತ್ರ, ಸ್ವಪ್ರೇರಣೆ (ಸು ಮೊಟೊ) ಯನ್ನು ಬಹಳ ಕಡಿಮೆ ಬಳಸುತ್ತವೆ. ಕೊನೆಯ ಬಾರಿ ಸರ್ವೋಚ್ಚ ನ್ಯಾಯಾಲಯ ಹಿಮಾಲಯದ ರಕ್ಷಣೆಯ ವಿಷಯದಲ್ಲಿ ಈ ಅಧಿಕಾರವನ್ನು ಬಳಸಿತ್ತು ಎಂದು ಸೆಟಲ್ವಾಡ್ ತಿಳಿಸಿದ್ದಾರೆ. ಅನ್ಯಾಯಗಳು ನಡೆಯುವಾಗ, ಜನರು ಸಾಯುತ್ತಿರುವಾಗ, ಅಮಾಯಕರನ್ನು ಬಂಧಿಸುವಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದೇ? ಎಂದಾಕೆ ತೂತುಕುಡಿ ಘಟನೆಯ ಬಗ್ಗೆ ನಡೆದ ಚರ್ಚೆಯ ವೇಳೆ ಪ್ರಶ್ನಿಸಿದ್ದಾರೆ. ಪ್ರತಿಭಟನೆಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ದಮನಿಸುವ ವಿದ್ಯಾಮಾನ ದೇಶದಲ್ಲಿ ಪ್ರಚಲಿತದಲ್ಲಿದೆ. ಇದರಿಂದಾಗಿ ಧರ್ಮಾಂಧತೆಯ ಕಲ್ಪನೆಯು ಮಿತಿಮೀರುತ್ತಿದೆ ಎಂದು ಸೆಟಲ್ವಾಡ್ ತಿಳಿಸಿದ್ದಾರೆ.

ಮೇ 22ರಂದು ತೂತುಕುಡಿಯಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ 13 ಮಂದಿ ಸಾವನ್ನಪ್ಪಿರುವ ಘಟನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಅದು ಬ್ರಿಟಿಶರ ಕಾಲದಲ್ಲಿ ಜನರಲ್ ಡಾಯರ್ ಜಲಿಯನ್‌ವಾಲಾ ಬಾಗ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಗೆ ಸವಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೀಮಾ ಕೊರೆಗಾಂವ್‌ನಲ್ಲಿ ನಡೆದ ಹಿಂಸಾಚಾರ, ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್‌ರ ಅಮಾನತು ಮತ್ತು ಭೀಮ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರ ಬಂಧನದ ಬಗ್ಗೆಯೂ ಮಾತನಾಡಿದ ಸೆಟಲ್ವಾಡ್ ದೇಶದಲ್ಲಿ ರಾಜಕೀಯ ಹೋರಟಗಾರರು, ಕ್ರಿಯಾತ್ಮಕ ಜನರು, ಯುವ ನಾಯಕರು, ಭಿನ್ನಾಭಿಪ್ರಾಯವುಳ್ಳವರು ಮತ್ತು ಮುಖ್ಯವಾಗಿ ಭೂಸ್ವಾಧೀನ ಮತ್ತು ಅರಣ್ಯಸ್ವಾಧೀನದ ವಿರುದ್ಧ ಚಳುವಳಿ ನಡೆಸುವ ಜನರನ್ನು ದಮನಿಸುವ ಕೆಲಸ ನಡೆಯುತ್ತಿದೆ ಎಂದು ಸೆಟಲ್ವಾಡ್ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News