ಉಡುಪಿ: ಜು.15ರಂದು ‘ಹೆಜ್ಜೆ ಗೆಜ್ಜೆ-ಬೆಳ್ಳಿ ಹೆಜ್ಜೆ’ ಉದ್ಘಾಟನೆ
ಉಡುಪಿ, ಜು.13: ಉಡುಪಿಯಲ್ಲಿ 1992 ರಲ್ಲಿ ಪ್ರಾರಂಭಗೊಂಡ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆ ಸ್ಥಾಪನೆಯ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇದರ ರಜತ ಮಹೋತ್ಸವ ‘ಹೆಜ್ಜೆ ಗೆಜ್ಜೆ-ಬೆಳ್ಳಿ ಹೆಜ್ಜೆ’ಯ ಉದ್ಘಾಟನಾ ಕಾರ್ಯಕ್ರಮ ಜು.15ರ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಹೆಜ್ಜೆ ಗೆಜ್ಜೆಯ ಕಾರ್ಯಾಧ್ಯಕ್ಷೆಯಾಗಿರುವ ವಿದುಷಿ ಯಶಾ ರಾಮಕೃಷ್ಣ ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 25 ವರ್ಷಗಳಲ್ಲಿ ಸುಮಾರು ಸಾವಿರಕ್ಕೂ ಅಧಿಕ ನೃತ್ಯ ಕಾರ್ಯಕ್ರಮಗಳನ್ನು ದೇಶಾದ್ಯಂತ ನೀಡಿದೆ. ರಜತ ಮಹೋತ್ಸವದ ಅಂಗವಾಗಿ ಮುಂದೆ ಉಡುಪಿಯಲ್ಲಿ ರಾಷ್ಟೀಯ ಮಟ್ಟದ ಭರತನಾಟ್ಯ ಸ್ಪರ್ಧೆ, ವಿಚಾರಸಂಕಿರಣ ಮತ್ತು ನೃತ್ಯಸರಣಿ ಕಾರ್ಯಕ್ರಮಳನ್ನು ಆಯೋಜಿಸಲಿದ್ದೇವೆ ಎಂದರು.
ರಜತಮಹೋತ್ಸವವನ್ನು ಜು.15ರಂದು ಅಪರಾಹ್ನ 3 ಗಂಟೆಗೆ ಸಮಿತಿಯ ಗೌರವಾಧ್ಯಕ್ಷರಾಗಿರುವ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ರಾಜಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್‌ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿರಿಯ ಕಲಾವಿಮರ್ಶಕ ಎ. ಈಶ್ವರಯ್ಯ, ದ.ಕಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಾಹೆ ವಿವಿಯ ನಿವೃತ್ತ ಕುಲಸಚಿವ ಟಿ. ರಂಗ ಪೈ, ಮಂಗಳೂರಿನ ಶ್ರೀನಿವಾಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳ ನಿರ್ದೇಶಕ ವಿಜಯಲಕ್ಷ್ಮಿ ಆರ್ ರಾವ್, ಮಂಗಳೂರಿನ ಎ ಶಾಮ ರಾವ್ ಪ್ರತಿಷ್ಠಾನದ ಕಾರ್ಯದರ್ಶಿ ಮಿತ್ರ ಎಸ್ ರಾವ್, ವಿದುಷಿ ಪ್ರತಿಭಾ ಎಲ್ ಸಾಮಗ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ನೃತ್ಯಾಂಜಲಿ ನೃತ್ಯ ಸರಣಿ ಕಾರ್ಯಕ್ರಮದ ಮೊದಲ ಕಾರ್ಯಕ್ರಮವಾಗಿ, ಭಾರತದ ಹೆಸರಾಂತ ನೃತ್ಯ ಕಲಾ ವಿದರಾದ ವಿದುಷಿ ಅನುರಾಧ ವಿಕ್ರಾಂತ್ ಮತ್ತು ತಂಡದಿಂದ (ದೃಷ್ಟಿ ಡ್ಯಾನ್ಸ್, ಬೆಂಗಳೂರು) ‘ನೃತ್ಯ ವೈಭವ’ ಕಾರ್ಯಕ್ರಮ ಸಂಜೆ 7 ಂಟೆಗೆ ರಾಜಾಂಗಣ ದಲ್ಲಿ ನಡೆಯಲಿದೆ.
ಅನಂತರ ‘ಹೆಜ್ಜೆ ಗೆಜ್ಜೆ ಬೆಳ್ಳಿ ಹೆಜ್ಜೆ’ ರಜತ ಮಹೋತ್ಸವದ ಅಂಗವಾಗಿ, ವಿವಿಧ ಕಾರ್ಯಕ್ರಮಗಳನ್ನು 4 ತಿಂಗಳ ಕಾಲ ಹಂತ ಹಂತವಾಗಿ ಆಯೋಜಿಸ ಲಾಗುವುದು ಎಂದು ದಿಶಾ ರಾಮಕೃಷ್ಣ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಜ್ಜೆ ಗೆಜ್ಜೆಯ ಉಪಾಧ್ಯಕ್ಷರಾದ ಡಾ.ರಾಮಕೃಷ್ಣ ಹೆಗಡೆ, ಎಸ್.ಎಲ್. ಕಾರ್ಣಿಕ್, ಶ್ರೀನಾಥ್ ರಾವ್ ಕೆ., ಕಾರ್ಯದರ್ಶಿಗಳು: ಎಚ್ ಎನ್ ವೆಂಕಟೇಶ್, ಜೊತೆ ಕಾರ್ಯದರ್ಶಿ ಅಂಜನಾ ಸುಧಾಕರ್, ಜಿ.ಪಿ. ಪ್ರಭಾಕರ್, ಕೋಶಾಧಿಕಾರಿ ಅವಿನಾಶ್ ಹೆಗಡೆ, ವಿದುಷಿ ಪ್ರತಿಭಾ ಎಲ್. ಸಾಮಗ, ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.