ಮಂಗಳೂರು: ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
Update: 2018-07-13 22:48 IST
ಮಂಗಳೂರು, ಜು.13: ಗುರುವಾರದಿಂದ ನಾಪತ್ತೆಯಾಗಿದ್ದ ಧನಲಕ್ಷ್ಮೀ ಎಂಬಾಕೆಯ ಮೃತದೇಹವು ಮಲ್ಲೂರಿನ ಪಲ್ಗುಣಿ ನದಿತೀರದಲ್ಲಿ ದೊರಕಿದೆ.
ಗುಜರಾತ್ ಮೂಲದ ವೋಖ್ರಾ ಎಂಬಲ್ಲಿಗೆ ವಿವಾಹವಾಗಿದ್ದ ಮಲ್ಲೂರು ಗಟ್ನಬೆಟ್ಟು ನಿವಾಸಿ ಧನಲಕ್ಷ್ಮೀ ಕಳೆದ ಹಲವಾರು ವರ್ಷಗಳಿಂದ ಗಂಡನ ಮನೆ ತೊರೆದು ತವರು ಮನೆಯಲ್ಲಿ ವಾಸವಾಗಿದ್ದರು. ಗುರುವಾರ ಬೆಳಗ್ಗೆಯಿಂದ ಈಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.
ಮಲ್ಲೂರು ಗಟ್ನಬೆಟ್ಟು ಗೋಪಾಲ ಮೂಲ್ಯರ ಐವರು ಪುತ್ರಿಯರಲ್ಲಿ ಮೂರನೆಯವಳಾಗಿರುವ ಈಕೆ ಮೂರ್ಛೆರೋಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈಕೆಗೆ ಎರಡು ವರ್ಷ ಪ್ರಾಯದ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.