ಕಂಚು ಪಡೆಯಲು ಸೋತವರ ಸೆಣಸು

Update: 2018-07-13 18:45 GMT

ಸೈಂಟ್‌ಪೀಟರ್ಸ್‌ಬರ್ಗ್, ಜು.13: ವಿಶ್ವಕಪ್‌ನಲ್ಲಿ ಫೈನಲ್‌ಗೇರುವ ಅವಕಾಶ ವಂಚಿತ ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳು ಶನಿವಾರ ಇಲ್ಲಿ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ಹಣಾಹಣಿ ನಡೆಸಲಿವೆೆ.

ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂ 0-1 ಅಂತರದಲ್ಲಿ ಮತ್ತು ಕ್ರೊಯೇಶಿಯ ವಿರುದ್ಧ ಇಂಗ್ಲೆಂಡ್ 1-2 ಅಂತರದಲ್ಲಿ ಸೋಲು ಅನುಭವಿಸಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು. ಉಭಯ ತಂಡಗಳಿಗೆ ಇನ್ನುಳಿದಿರುವುದು ಮೂರನೇ ಸ್ಥಾನಕ್ಕಾಗಿ ಆಡುವ ಅವಕಾಶ .

ಬೆಲ್ಜಿಯಂ ಮತ್ತು ಇಂಗ್ಲೆಂಡ್ 2018ರ ವಿಶ್ವಕಪ್‌ನ ‘ಜಿ’ ಗುಂಪಿನಲ್ಲಿ ಸ್ಥಾನ ಪಡೆದು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದೊಂದಿಗೆ 16ರ ಘಟ್ಟ ಪ್ರವೇಶಿಸಿದ್ದವು. ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಬೆಲ್ಜಿಯಂ 1-0 ಅಂತರದಲ್ಲಿ ಸೋಲಿಸಿತ್ತು.

   ಇಂಗ್ಲೆಂಡ್‌ಗೆ ಇದೀಗ ಬೆಲ್ಜಿಯಂ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ವಿಶ್ವಕಪ್‌ನಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ‘‘ಸೆಮಿಫೈನಲ್‌ನಲ್ಲಿ ಸೋತ ಬಳಿಕ ಯಾವುದೇ ತಂಡಕ್ಕೂ ಇನ್ನೊಂದು ಪಂದ್ಯದಲ್ಲಿ ಆಡುವ ಆಸಕ್ತಿ ಇರುವುದಿಲ್ಲ. ಆದರೆ ಗೌರವದಿಂದ ತವರಿಗೆ ಮರಳಲು ಈ ಪಂದ್ಯದಲ್ಲಿ ಜಯಿಸಬೇಕಾ ಗಿದೆ. ನಾವು ಪ್ಲೇ ಆಫ್‌ನಲ್ಲಿ ಆಡಲು ತಯಾರಾಗಿದ್ದೇವೆ ’’ ಎಂದು ಇಂಗ್ಲೆಂಡ್ ತಂಡದ ಕೋಚ್ ಗ್ಯಾರೆತ್ ಸೌತ್‌ಗೇಟ್ ಅಭಿಪ್ರಾಯಪಟ್ಟಿದ್ದಾರೆ. ‘‘ ಸೋಲಿನ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಈ ಕಾರಣದಿಂದಾಗಿ ಇನ್ನೊಂದು ಪಂದ್ಯದಲ್ಲಿ ಚೆನ್ನಾಗಿ ಆಡುವುದನ್ನು ನಿರೀಕ್ಷಿಸುವಂತಿಲ್ಲ. ಹೀಗಿದ್ದರೂ ನಾವು ಮೂರನೇ ಸ್ಥಾನ ಪಡೆಯಲು ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡಲು ಶ್ರಮಿಸುತ್ತೇವೆ’’ ಎಂದು ಬೆಲ್ಜಿಯಂ ಕೋಚ್ ರಾಬೆರ್ಟ್ ಮಾರ್ಟಿನೆಝ್ ತಿಳಿಸಿದ್ದಾರೆ. ಬೆಲ್ಜಿಯಂ ತಂಡ 1986ರಲ್ಲಿ ಫಿಫಾ ವಿಶ್ವಕಪ್‌ನಲ್ಲಿ 4ನೇ ಸ್ಥಾನ ಗಳಿಸಿತ್ತು. ಫ್ರಾನ್ಸ್ ವಿರುದ್ಧ ಬೆಲ್ಜಿಯಂ ಸೋಲು ಅನುಭವಿಸಿ 4ನೇ ಸ್ಥಾನ ಪಡೆದಿತ್ತು. ಮೂರನೇ ಸ್ಥಾನ ಪಡೆಯಲು 32 ವರ್ಷಗಳ ಬಳಿಕ ಮತ್ತೊಮ್ಮೆ ಬೆಲ್ಜಿಯಂ ಹೋರಾಟ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News