ಬಿಜೆಪಿ ಮಾಜಿ ಸಂಸದ ರಾಮ್ ಶಕಲ್ ಸಹಿತ ನಾಲ್ವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ಶಿಫಾರಸು

Update: 2018-07-14 14:14 GMT

ಹೊಸದಿಲ್ಲಿ,ಜು.14 :  ಬಿಜೆಪಿ ಮಾಜಿ ಸಂಸದ ರಾಮ್ ಶಕಲ್, ಆರೆಸ್ಸೆಸ್ ನಾಯಕ ರಾಕೇಶ್ ಸಿನ್ಹಾ, ಶಾಸ್ತ್ರೀಯ ನೃತ್ಯಪಟು ಸೋನಾಲ್ ಮಾನ್‍ಸಿಂಗ್ ಹಾಗೂ ಶಿಲ್ಪ ಕಲಾವಿದ ರಘುನಾಥ್ ಮೊಹಾಪಾತ್ರ ಅವರನ್ನು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್ಯಸಭೆಗೆ ನೇಮಕಗೊಳಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯ ಶಿಫಾರಸಿನಂತೆ ಈ ನೇಮಕಾತಿ ನಡೆದಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ರಾಜ್ಯಸಭೆಗೆ ನೇಮಕಗೊಂಡಿರುವ ರಾಮ್ ಶಕಲ್ ಮೂರು ಬಾರಿ ಲೋಕಸಭೆಯನ್ನು ಉತ್ತರ ಪ್ರದೇಶದ ರಾಬಟ್ರ್ಸ್ ಗಂಜ್ ಕ್ಷೇತ್ರವನ್ನು ಪ್ರತನಿಧಿಸಿದ್ದಾರೆ. ರಾಕೇಶ್ ಸಿನ್ಹಾ ಅವರು ದಿಲ್ಲಿ ಮೂಲದ ಇಂಡಿಯಾ ಪಾಲಿಸಿ ಫೌಂಡೇಶನ್ ಇದರ ಸ್ಥಾಪಕ ಹಾಗೂ ಗೌರವ ನಿರ್ದೇಶಕರಾಗಿದ್ದಾರೆ. ದಿಲ್ಲಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಮೋತಿಲಾಲ್ ನೆಹರೂ ಕಾಲೇಜನಲ್ಲಿ ಪ್ರೊಫೆಸರ್ ಆಗಿರುವ ಅವರು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸಾಯನ್ಸ್ ರಿಸರ್ಚ್ ಇದರ ಸದಸ್ಯರೂ ಆಗಿದ್ದಾರೆ.

ಶಿಲ್ಪ ಕಲಾವಿದ ರಘುನಾತ್ ಮೊಹಾಪಾತ್ರ ಜಗದ್ವಿಖ್ಯಾತ ಕಲಾವಿದರಾಗಿದ್ದು 1959ರಿಂದ ಈ ಕ್ಷೇತ್ರದಲ್ಲಿರುವ ಅವರು 2,000ಕ್ಕೂ ಅಧಿಕ ಶಿಷ್ಯರಿಗೆ ಈ ಕಲೆಯನ್ನು ಕಲಿಸಿಕೊಟ್ಟಿದ್ದಾರೆ. ಪುರಿಯ ಜಗನ್ನಾಥ ದೇವಾಲಯದ ಸುಂದರೀಕರಣದಲ್ಲೂ ಅವರ ಪಾತ್ರವಿದೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿರುವ ಆರು ಆಡಿ ಎತ್ತರದ ಸೂರ್ಯ ದೇವರ ಮೂರ್ತಿ ಹಾಗೂ ಪ್ಯಾರಿಸ್ ನ ಬುದ್ಧ ದೇವಸ್ಥಾನದಲ್ಲಿರುವ ಬುದ್ಧನ ಮರದ ಪ್ರತಿಮೆ ಅವರ ಕೈಚಳಕದಲ್ಲಿ ಮೂಡಿ ಬಂದಿವೆ.

ಸೊನಾಲ್ ಮಾನ್ ಸಿಂಗ್ ಭಾರತದ ಖ್ಯಾತ ಶಾಸ್ತ್ರೀಯ ನೃತ್ಯಗಾತಿಯಾಗಿದ್ದು ಕಳೆದ ಆರು ದಶಕಗಳಿಂದ ಆಕೆ ಭರತನಾಟ್ಯಂ ಮತ್ತು ಒಡಿಶಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ನೃತ್ಯ ಗುರು ಹಾಗೂ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಆಕೆ ಸೆಂಟರ್ ಫಾರ್ ಇಂಡಿಯನ್ ಕ್ಲಾಸಿಕಲ್ ಡಾನ್ಸಸ್ ಎಂಬ ಸಂಸ್ಥೆಯನ್ನು ದಿಲ್ಲಿಯಲ್ಲಿ 1977ರಲ್ಲಿ ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News