ಸೈಬರ್ ಕ್ರೈಮ್ ತನಿಖೆ ಪೊಲೀಸರ ಮುಂದಿನ ದೊಡ್ಡ ಸವಾಲು: ನ್ಯಾಯಾಧೀಶ ವೆಂಕಟೇಶ್ ನಾಯ್ಕ
ಉಡುಪಿ, ಜು.14: ಇಂದು ತಂತ್ರಜ್ಞಾನಗಳ ದುರ್ಬಳಕೆ ಅಧಿಕವಾಗಿ ಅಪರಾಧಗಳು ವೈಜ್ಞಾನಿಕ ಸ್ವರೂಪ ಪಡೆದುಕೊಳ್ಳುತ್ತಿವೆ. ಇದರಿಂದ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಪ್ರಸ್ತುತ ಇದನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸ. ಇಂತಹ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದು ಅಪ ರಾಧಿ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಟಿ. ಹೇಳಿದ್ದಾರೆ.
ಉಡುಪಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಡುಪಿ ಎಸ್ಪಿ ಕಚೇರಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಲಾದ ಸೈಬರ್ ಅಪರಾಧಗಳ ತನಿಖೆ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಾವುದೇ ಒಂದು ದೇಶ ಅಭಿವೃದ್ಧಿ ಕಾಣಬೇಕಾದರೆ ಭ್ರಷ್ಟಚಾರ ಹಾಗೂ ಅಪರಾಧ ಮುಕ್ತವಾಗಿರಬೇಕು. ದೇಶ ವೈಜ್ಞಾನಿಕವಾಗಿ ಅಭಿವೃದ್ಧಿಯಾಗುತ್ತಿದ್ದಂತೆ ತಂತ್ರಜ್ಞಾನಗಳ ದುರ್ಬಳಕೆ ಕೂಡ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿ ರುವ ಸೈಬರ್ ಕ್ರೈಂಗಳ ಪ್ರಮುಖ ಮೂಲ ಕಂಪ್ಯೂಟರ್ ಹಾಗೂ ಅವುಗಳಲ್ಲಿನ ಸಂಪನ್ಮೂಲಗಳು. ಆನ್‌ಲೈನ್ ಜಾಹೀರಾತು, ಇಮೇಲ್ ಸಂದೇಶ, ಹ್ಯಾಕ್ ಮಾಡುವ ಮೂಲಕ ಮೋಸ, ವಂಚನೆ ಎಸಲಾಗುತ್ತಿದೆ. ಅಂತರ್ಜಾಲವನ್ನು ನಾವು ಸುರಕ್ಷಿತವಾಗಿ ಬಳಕೆ ಮಾಡದಿದ್ದರೆ ಮೋಸ ನಮಗೆ ಕಟ್ಟಿಟ್ಟ ಬುತ್ತಿ ಎಂದರು.
ಸೈಬರ್ ಕ್ರೈಮ್‌ಗಳ ವಿರುದ್ಧ ತಮ್ಮ ತಮ್ಮ ಮನೆಗಳಿಂದಲೇ ಹೋರಾಟ ಆರಂಭವಾಗಬೇಕು. ಅಪರಿಚಿತ ವ್ಯಕ್ತಿಗಳಿಂದ ಮೊಬೈಲ್ ಹಾಗೂ ಇಮೇಲ್ ನಲ್ಲಿ ಬರುವ ಸಂದೇಶಗಳಿಗೆ ರಿಪ್ಲೈ ಮಾಡಬೇಡಿ. ಇಂದು ಹೆಚ್ಚಾಗಿ ನಡೆಯು ತ್ತಿರುವ ಸೈಬರ್ ಕ್ರೈಮ್‌ಗಳಿಗೆ ಕಡಿವಾಣ ಹಾಕಲು ಭಾರತದಲ್ಲಿ 2000 ಇಸವಿ ಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯು ಜಾರಿಗೆ ಬಂದಿದ್ದು, 2008ರಲ್ಲಿ ಇದಕ್ಕೆ ತಿದ್ದುಪಡಿಗಳಾಗಿವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಮಾತನಾಡಿ, ಸೈಬರ್ ಅಪರಾಧಗಳಲ್ಲಿ ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಪತ್ತೆ ಪೊಲೀಸರಿಗೆ ತುಂಬಾ ಕ್ಲಿಷ್ಟಕರವಾಗಿರುತ್ತದೆ. ಇದರಲ್ಲಿ ತನಿಖೆ ಎಲ್ಲಿಂದ ಹಾಗೂ ಹೇಗೆ ಆರಂಭಿಸುವುದು ಎಂಬುದೇ ದೊಡ್ಡ ಪ್ರಶ್ನೆಯಾ ಗಿರುತ್ತದೆ. ತಂತ್ರಜ್ಞಾನ ಸಾಗುವ ವೇಗದಲ್ಲಿ ಅದನ್ನು ಬೇಧಿಸುವ ಪರಿಣಿತರು ನಮ್ಮ ದೇಶದಲ್ಲಿ ಇಲ್ಲ. ಆದುದರಿಂದ ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸೈಬರ್ ಅಪರಾಧಗಳಲ್ಲಿ ನಡೆಯುವ ಎಲ್ಲ ವಂಚನೆಗಳಿಗೆ ದುರಾಸೆಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ಹಾಗೂ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಮುಖ್ಯ ಅತಿಥಿಗಳಾಗಿದ್ದರು.
ಮೈಸೂರು ಕೆಪಿಎ ಸ್ರೈಬರ್ ಅಪರಾಧ ಕಾನೂನು ಹಾಗೂ ಭದ್ರತೆ ತರ ಬೇತುದಾರ ಡಾ.ಅನಂತ ಪ್ರಭು ಹಾಗೂ ಅಮೆರಿಕಾದ ಫ್ಲೋರಿಡಾ ವಿವಿಯ ಸಹಾಯಕ ಪ್ರೊಫೆಸರ್ ಡಾ.ವರದರಾಜ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಸ್ವಾಗತಿಸಿದರು. ಉಡುಪಿ ಡಿೈಎಸ್ಪಿ ಕುಮಾರಸ್ವಾಮಿ ವಂದಿಸಿದರು.
ವಾಟ್ಸಾಪ್ ಸಂದೇಶದ ಮೂಲ ಪತ್ತೆಗೆ ಸಾಫ್ಟ್‌ವೇರ್
ಎಲ್ಲೊ ನಡೆದ ಅಪರಾಧ ಕೃತ್ಯಗಳ ವಿಡಿಯೋವೊಂದನ್ನು ಭಾರತದಲ್ಲಿ ನಡೆದಿರುವಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪರಿ ಣಾಮ ಗಲಭೆ ನಡೆದು 28 ಮಂದಿ ಜೀವ ಕಳೆದುಕೊಂಡಿದ್ದಾರೆ. ವಾಟ್ಸಾಪ್ ಕರೆಗಳನ್ನು ನಮಗೆ ಈಗಲೂ ಭೇದಿಸಲು ಆಗುವುದಿಲ್ಲ. ಯಾಕೆಂದರೆ ಅದರಲ್ಲಿ ರೆರ್ಕಾಡಿಂಗ್ ವ್ಯವಸ್ಥೆಗಳಿಲ್ಲ. ವಾಟ್ಸಾಪ್‌ಗಳಲ್ಲಿ ಫಾರ್ವರ್ಡ್ ಆಗುವ ಸಂದೇಶಗಳ ಮೂಲ ಪತ್ತೆ ಮಾಡಬೇಕಾದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದರು.
ವಾಟ್ಸಾಪ್ ಫಾರ್ವರ್ಡ್ ಸಂದೇಶಗಳ ಮೂಲ ಪತ್ತೆಯನ್ನು ಹಚ್ಚುವ ಕುರಿತು ಕೇಂದ್ರ ಸರಕಾರ ವಾಟ್ಸಾಪ್ ಕಂಪೆನಿಯನ್ನು ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪೆನಿಯು ಸಾಪ್ಟ್‌ವೇರ್‌ಗಳಿಗೆ ಆಫರ್ ನೀಡಿ ಸಂದೇಶದ ಮೂಲ ಪತ್ತೆ ಹಚ್ಚುವ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿ ಪಡಿಸುವಂತೆ ಕೇಳಿಕೊಂಡಿದೆ. ಯಾಕೆಂದರೆ ವಾಟ್ಸಾಪ್ ಕಂಪೆನಿಯವರಿಗೂ ಇದು ಗೊತ್ತಿಲ್ಲ ಎಂದು ಅವರು ಹೇಳಿದರು.