×
Ad

ಜೆಡಿಎಸ್ ಮುಖಂಡನ ವೈಯಕ್ತಿಕ ತೇಜೋವಧೆ ಆರೋಪ: ಎಸ್ಪಿಗೆ ದೂರು

Update: 2018-07-14 18:14 IST
ಹಾರೂನ್ ರಶೀದ್

ಬಂಟ್ವಾಳ, ಜು. 14: ನಕಲಿ ಆಧಾರ್ ಕಾರ್ಡ್ ನೋಂದಣಿ ಮಾಡಲಾಗುತ್ತಿದೆ ಎನ್ನುವ ಕಪೋಲಕಲ್ಪಿತ ಆರೋಪ ಮಾಡಿ ವೈಯಕ್ತಿಕ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಅವರು ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರಿಗೆ ದೂರು ನೀಡಿದ್ದಾರೆ.

ಅಧಿಕೃತವಾಗಿ ನಡೆಸಲಾಗುತ್ತಿದ್ದ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದನ್ನು ಮುಂದಿಟ್ಟು ರಾಜಕೀಯ ವಿರೋಧಿಗಳು ತನ್ನ ಮೇಲೆ ಸುಳ್ಳು ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಹಾಗೂ ಪಕ್ಷವನ್ನು ನಿಂದಿಸಿದ್ದು, ಸುಳ್ಳು ಪ್ರಕರಣದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ತೇಜೋವಧೆ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಪ್ರಕರಣವನ್ನು ತನಿಖೆ ನಡೆಸಿ, ವರದಿ ಸಲ್ಲಿಸಲು ತಹಶೀಲ್ದಾರ್ ಹಾಗೂ ಸ್ಥಳೀಯ ಠಾಣಾಧಿಕಾರಿಗೆ ಆದೇಶಿಸಿರುವುದಾಗಿ ಜಿಲ್ಲಾ ಮುಖಂಡ ಹಾರೂನ್ ರಶೀದ್ ತಿಳಿಸಿದ್ದಾರೆ.

ಉಚಿತ ಸೇವೆಗೆ ತಾತ್ಕಾಲಿಕ ಕೇಂದ್ರ: ಪ್ರತಿದಿನ ಆಧಾರ್, ಪಡಿತರ ಚೀಟಿ, ಮನೆ, ನಿವೇಶನ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವಾರು ಮಂದಿ ತನ್ನ ಬಳಿ ಬರುತ್ತಿದ್ದಾರೆ. ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶ್ರಮಿಸಿದ್ದೇನೆ. ಇದುವರೆಗೂ ಯಾರಿಂದರೂ ಹಣ ತೆಗೆದುಕೊಂಡಿಲ್ಲ. ಸಾರ್ವಜನಿಕರಿಗೆ ಉಚಿತ ಸೇವೆ ನೀಡುವುದಕ್ಕಾಗಿ ಎರಡು ದಿನಗಳ ಮಟ್ಟಿಗೆ ಮನೆಯಲ್ಲಿಯೇ ತಾತ್ಕಾಲಿಕವಾಗಿ ಆಧಾರ್ ಕೇಂದ್ರ ತೆರೆದಿರುವುದಾಗಿ ಹಾರೂನ್ ರಶೀದ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News