×
Ad

ರೈಲು ನಿಲ್ದಾಣ, ರೈಲು ಮಾರ್ಗಗಳ ಸಮಸ್ಯೆ ಬಗ್ಗೆ ಸರ್ವೆ ನಡೆಸಲು ಅಧಿಕಾರಿಗಳಿಗೆ ಸಂಸದ ನಳಿನ್ ಸೂಚನೆ

Update: 2018-07-14 18:27 IST

ಮಂಗಳೂರು, ಜು.14: ಮೈಸೂರು ವಿಭಾಗಕ್ಕೆ ಒಳಪಟ್ಟ ನಗರದ ಪಡೀಲ್‌ನಿಂದ ಶಿರಾಡಿ ಘಾಟ್‌ವರೆಗಿನ ರೈಲು ನಿಲ್ದಾಣ ಹಾಗೂ ರೈಲು ಮಾರ್ಗಗಳ ಸಮಸ್ಯೆಗಳ ಬಗ್ಗೆ ಸರ್ವೆ ನಡೆಸಿ ಶೀಘ್ರ ವರದಿ ಸಲ್ಲಿಸಲು ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮೈಸೂರು ವಿಭಾಗ ವ್ಯಾಪ್ತಿಯ ರೈಲ್ವೆ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಡೀಲ್‌ನಿಂದ ಶಿರಾಡಿ ಘಾಟ್‌ವರೆಗೆ ರೈಲು ಮಾರ್ಗ ಮೈಸೂರು ವಿಭಾಗಕ್ಕೆ ಸೇರಿದೆ. 9 ವರ್ಷಗಳಲ್ಲಿ ಒಂದೆರಡು ಸಲ ರೈಲ್ವೆ ಅಭಿವೃದ್ಧಿ ಸಮಿತಿ ಸಭೆಗೆ ಹಾಜರಾಗಿದ್ದು ಬಿಟ್ಟರೆ ಬೇರೆ ಯಾವುದೇ ಸಭೆಗಳಿಗೆ ಅಲ್ಲಿನ ಅಧಿಕಾರಿಗಳು ಬರುತ್ತಿಲ್ಲ. ಈ ಮೂಲಕ ಮೈಸೂರು ವಿಭಾಗದ ಅಧಿಕಾರಿಗಳು ಮಂಗಳೂರಿನ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಇದರಿಂದ ಪಾಲ್ಘಾಟ್ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅಭಿವೃದ್ಧಿ ಕಾರ್ಯ ನಡೆಸಲು ತೊಂದರೆಯಾಗಿದೆ. ಅಧಿಕಾರಿಗಳ ವರ್ತನೆ ಹೀಗೆ ಮುಂದುವರಿದರೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ದೂರು ಸಲ್ಲಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.

ಮಂಗಳೂರು-ಮೈಸೂರು ರೈಲ್ವೆ ಮಾರ್ಗದ ಕುಂದುಕೊರತೆ ಪರಿಶೀಲನೆ ವೇಳೆ ಮೈಸೂರು ವಿಭಾಗೀಯ ರೈಲ್ವೆ ಅಧಿಕಾರಿಗಳು ನಕಾರಾತ್ಮಕವಾಗಿ ಉತ್ತರಿಸಿದಾಗ ಅಸಮಾಧಾನಗೊಂಡ ಸಂಸದರು, ಪ್ರತಿಯೊಂದು ಕೆಲಸಕ್ಕೆ ಕಾನೂನು ನೆಪ ಹೇಳಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು ಎಂದು ಆಕ್ರೋಶಗೊಂಡರು.

ಒತ್ತುವರಿ ತೆರವು : ಫರಂಗಿಪೇಟೆಯಲ್ಲಿ ರೈಲ್ವೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಮೀನು ಮಾರಾಟ, ಕ್ಯಾಂಟಿನ್‌ಗಳನ್ನು ನಡೆಸಲಾಗುತ್ತಿದೆ. ಪ್ರತಿದಿನವೂ ರೈಲ್ವೆ ಅಧಿಕಾರಿಯೊಬ್ಬರು ಅನಧಿಕೃತವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರೊಬ್ಬರು ಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ವಿಭಾಗೀಯ ನಿಯಂತ್ರಕ ಆರ್.ಕೆ.ಸಿನ್ನಾ ಒತ್ತುವರಿಗಳನ್ನು ತೆರವುಗೊಳಿಸಿ ಅನಧಿಕೃತ ವಸೂಲಿ ನಿಲ್ಲಿಸುವುದಾಗಿ ಹೇಳಿದರು.

ಪ್ಯಾಸೆಂಜರ್ ವಿಸ್ತರಣೆ: ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಮಾರ್ಗಕ್ಕೆ ವಿಸ್ತರಿಸಬೇಕು. ಮಂಗಳೂರು ಜಂಕ್ಷನ್‌ನಲ್ಲಿ ರೈಲು ಬೆಳಗ್ಗೆ ವಿನಾ ಕಾರಣ ಒಂದು ತಾಸು ನಿಲ್ಲುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸುದರ್ಶನ ಪುತ್ತೂರು ಹೇಳಿದರು.

ಈ ತೊಂದರೆಯನ್ನು ತಪ್ಪಿಸಲು ಫಾಲ್ಘಾಟ್ ವಿಭಾಗದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕು. ಪುತ್ತೂರು ಪ್ಯಾಸೆಂಜರ್ ರೈಲನ್ನು ರಾತ್ರಿ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಮರುದಿನ ಅಲ್ಲಿಂದಲೇ ಮಂಗಳೂರಿಗೆ ಹೊರಡುವಂತೆ ವ್ಯವಸ್ಥೆ ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.

ಕೆಳಸೇತುವೆ ನಿರ್ಮಾಣ: ಅಡ್ಯಾರ್-ಕೆಮ್ಮಂಜೂರು, ವಳಚ್ಚಿಲ್, ಫರಂಗಿಪೇಟೆ ಮಧ್ಯೆ ಕೆಳ ಸೇತುವೆ ನಿರ್ಮಾಣಕ್ಕೆ ಜಾಗ ಪರಿಶೀಲಿಸಬೇಕು. ಅಡ್ಯಾರ್‌ನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಲೆವೆಲ್ ಕ್ರಾಸಿಂಗ್ ಮೂಲಕ ವಾಹನಗಳು ಸಂಚರಿಸಬೇಕಾಗಿರುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಅಲ್ಲದೆ ಪುತ್ತೂರಿನ ಎಪಿಎಂಸಿ ಬಳಿ ಕೆಳಸೇತುವೆ ರಚನೆ, ಪುತ್ತೂರು ವಿವೇಕಾನಂದ ಕಾಲೇಜು ಬಳಿ ಕೆಳ ಅಥವಾ ಮೇಲ್ಸೇತುವೆ ರಚನೆ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಸಂಸದರು ಸೂಚಿಸಿದರು.

ರಾತ್ರಿ ಇನ್ನೊಂದು ರೈಲು ಬೇಡಿಕೆ: ಬೆಂಗಳೂರು ರಾತ್ರಿ ರೈಲಿಗೆ ಕಾರವಾರ ಮತ್ತು ಕಣ್ಣೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೋಚ್‌ಗಳನ್ನು ಇರುವುದಿಲ್ಲ. ಆದ್ದರಿಂದ ಎರಡೂ ಕಡೆಗಳಿಗೆ ಪ್ರತ್ಯೇಕ ಕೋಚ್ ಅಳವಡಿಸುವ ಬದಲು ಒಂದು ಗಂಟೆ ಅಂತರದಲ್ಲಿ ಬೇರೊಂದು ರೈಲನ್ನು ಓಡಿಸುವಂತೆ ಸುದರ್ಶನ ಪುತ್ತೂರು ಸಲಹೆ ಮಾಡಿದರು.

ಮಂಗಳೂರು-ಬೆಂಗಳೂರು ಮಧ್ಯೆ ರಾತ್ರಿ ಇನ್ನೊಂದು ರೈಲು ಸಂಚಾರ ಆರಂಭಿಸಲು ಸಾಧ್ಯವಿಲ್ಲ. ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಘಾಟ್ ಪ್ರದೇಶ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಈ ಭಾಗದಲ್ಲಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಬೇಕಾಗುತ್ತದೆ ಎಂದು ಸಹಾಯಕ ವಿಭಾಗೀಯ ನಿಯಂತ್ರಕ ಆರ್.ಕೆ.ಸಿನ್ನಾ ಹೇಳಿದರು.

ಆದರೆ ಇದನ್ನು ಒಪ್ಪದ ರೈಲ್ವೆ ಸಂಘಟನೆಗಳ ಪದಾಧಿಕಾರಿಗಳು, ಗೂಡ್ಸ್ ರೈಲು ಸಂಚರಿಸಲು ಸಾಧ್ಯವಿದೆ ಎಂದಾದರೆ ಇನ್ನೊಂದು ಎಕ್ಸ್‌ಪ್ರೆಸ್ ರೈಲು ಸಂಚಾರ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ಗೊಮ್ಮಟ ಎಕ್ಸ್‌ಪ್ರೆಸ್ ರೈಲನ್ನು ಶನಿವಾರ ರದ್ದುಪಡಿಸಬಾರದು. ಬೆಂಗಳೂರಿನಿಂದ ಶನಿವಾರ ಆಗಮಿಸುವ ಸಾಕಷ್ಟು ಮಂದಿ ಪ್ರಯಾಣಿಕರು ಇದರ ಪ್ರಯೋಜನಪಡೆಯಲು ಸಾಧ್ಯವಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಸದರು ಹೇಳಿದರು.

ಕಬಕ ಪುತ್ತೂರು ರೈಲು ನಿಲ್ದಾಣಕ್ಕೆ ಹಾರಾಡಿ ಹೆದ್ದಾರಿಯಿಂದ ಸಂಪರ್ಕಿಸುವ ರಸ್ತೆಯನ್ನು ರೈಲ್ವೆ ಅಭಿವೃದ್ಧಿಪಡಿಸಬೇಕು. ಅಥವಾ ನಗರ ಪಂಚಾಯತ್‌ಗೆ ಬಿಟ್ಟುಕೊಡಬೇಕು ಎಂದು ಶಾಸಕ ಸಂಜೀವ ಮಠಂದೂರು ಪ್ರಸ್ತಾಪಿಸಿದರು.

ಈ ಪ್ರದೇಶವನ್ನು ರೈಲ್ವೆ ಉಪಕರಣಗಳನ್ನು ಸಂಗ್ರಹಿಸಲು ಉಪಯೋಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದಾಗ ಅದನ್ನು ಒಪ್ಪದ ಸಂಸದರು, ಮೈಸೂರು ವಿಭಾಗದಿಂದ ಸ್ಥಳೀಯಾಡಳಿತ ಅಭಿವೃದ್ಧಿಪಡಿಸುವ ಬಗ್ಗೆ ನಿರಕ್ಷೇಪಣಾ ಪತ್ರವನ್ನು ನೀಡಿದೆ. ಆದ್ದರಿಂದ ಸ್ಥಳೀಯಾಡಳಿತ ಅಭಿವೃದ್ಧಿಪಡಿ ಸುವುದಕ್ಕೆ ಯಾವುದೇ ಅಡ್ಡಿಪಡಿಸಬಾರದು ಎಂದು ಸೂಚನೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು-ಹಾಸನ ಮೂಲಕ ತಿರುಪತಿಗೆ ಹೊಸ ರೈಲು ಸಂಚಾರ ಆರಂಭಿಸಬೇಕು. ತಿರುಪತಿಗೆ ಉಡುಪಿ, ಮಂಗಳೂರಿನಿಂದ ನಿತ್ಯ 8-10 ಟೂರಿಸ್ಟ್ ಬಸ್‌ಗಳು ಸಂಚರಿಸುತ್ತವೆ. ರೈಲು ಸಂಚಾರ ಸಾಧ್ಯವಾದರೆ ಜನತೆಗೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News