ನಗರಗಳಲ್ಲಿ 'ಜಿ ಪ್ಲಸ್ 14' ವಸತಿ ಸಮುಚ್ಚಯ ನಿರ್ಮಾಣಕ್ಕೆ ಯೋಜನೆ: ಸಚಿವ ಖಾದರ್
ಉಡುಪಿ, ಜು.14: ನಗರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡಗಳಿಗೆ ಪ್ರೋತ್ಸಾಹ ನೀಡಲು ಸರಕಾರ ನಿರ್ಧರಿಸಿದ್ದು, ಜಿ ಪ್ಲಸ್ ತ್ರಿ ಮಹಡಿಯ ಬದಲು ಪ್ರಮುಖ ನಗರಗಳಲ್ಲಿರುವ ಜಾಗದಲ್ಲಿ 'ಜಿ ಪ್ಲಸ್ 14' ಮಹಡಿಯ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಉಡುಪಿ ಪ್ರವಾಸಿ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸೆಯ ಪರಿಣಾಮ ನಗರದಲ್ಲಿ ಶೇ. 50ರಷ್ಟು ಜನಸಂಖ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ನಗರ ವಸತಿ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ಜನರ ಪಾಲನ್ನು ಪಡೆದು ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ವಸತಿ ಯೋಜನೆಗೆ ಸಂಬಂಧಿಸಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನಿಗದಿ ಪಡಿಸಿದ ಗುರಿಯನ್ನು ಸಾಧಿಸಲಾಗಿದ್ದು ಬೇಡಿಕೆ ಇದ್ದರೆ ಇನ್ನು ಕೂಡ ಮನೆ ಮಂಜೂರು ಮಾಡಲು ಸರಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿಗೆ 118 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಆಡಳಿತ್ಮಾತಕ ಮಂಜೂರಾತಿ ದೊರಕಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯು ಕೆಲವು ಕಡೆಗಳಲ್ಲಿ ಜಾಗದ ತಕರಾರಿನಿಂದ ಬಾಕಿಯಾಗಿದ್ದು, ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಕಾಪು ಪುರಸಭೆ ವ್ಯಾಪ್ತಿಯಲ್ಲಿ 60 ಕೋಟಿ ರೂ. ವೆಚ್ಚದ ಕುಡಿ ಯುವ ನೀರಿನ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಉಡುಪಿ ನಗರದ ನಿಟ್ಟೂರು, ಕೊಡಂಕೂರು, ವಿಷ್ಣುಮೂರ್ತಿ ನಗರ, ಪಾಳೆ ಕಟ್ಟೆಯಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ 500 ಮನೆಗಳನ್ನು ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು. ಅನ್ನಭಾಗ್ಯ ಯೋಜನೆಯಲ್ಲಿ ಏಳು ಕೆ.ಜಿ. ಅಕ್ಕಿ ನೀಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲಿಸಿ ಬೇಡಿಕೆಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಮಾತೃಪೂರ್ಣ ಯೋಜನೆಯು ಒಟ್ಟಾರೆ ರಾಜ್ಯದಲ್ಲಿ ಶೇ.75ರಷ್ಟು ಯಶಸ್ವಿಯಾಗಿದೆ. ಕರಾವಳಿಯಲ್ಲಿ ಮಾತ್ರ ಕೆಲವು ಸಮಸ್ಯೆಗಳು ಎದುರಾಗಿವೆ. ಈ ಜಿಲ್ಲೆಯಲ್ಲಿ ಯಾವ ರೀತಿ ಅನುಷ್ಠಾನಕ್ಕೆ ತರಬೇಕೆಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಅದರಂತೆ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ ಉಪಸ್ಥಿತರಿದ್ದರು.
70 ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭ
ಉಡುಪಿ ಜಿಲ್ಲೆಗೆ ನಾಲ್ಕು ಇಂದಿರಾ ಕ್ಯಾಂಟೀನ್ ಮಂಜೂರು ಆಗಿದ್ದು, ಈಗಾಗಲೇ ಎರಡು ಆರಂಭಗೊಂಡಿವೆ. ಉಳಿದ ಎರಡು ಕ್ಯಾಂಟೀನ್‌ನ್ನು ಅತಿ ಶೀಘ್ರವೇ ಆರಂಭಿಸಲಾಗುವುದು. ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರ ಗಳಲ್ಲಿ 136 ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದ್ದು, 37 ಕ್ಯಾಂಟೀನ್ ಗಳ ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ 70 ಕ್ಯಾಂಟೀನ್‌ಗಳನ್ನು ಕೂಡಲೇ ಆರಂಭಿಸಲಾಗುವುದು. ಯೋಜನೆಯ ಒಟ್ಟು ವೆಚ್ಚ 211ಕೋಟಿ ರೂ.ನಲ್ಲಿ 110ಕೋಟಿ ರೂ.ವನ್ನು ವ್ಯಯಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗಳ ಮೆನು ಹಾಗೂ ಇತರ ವ್ಯವಸ್ಥೆಗಳಲ್ಲಿ ಬದಲಾವಣೆ ತರುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.