×
Ad

ಉದ್ಯೋಗ ನೀಡದ ಕೇಂದ್ರ ಸರಕಾರ ಶಿಕ್ಷಣ ಸಾಲ ಮನ್ನಾ ಮಾಡಲಿ: ಸಚಿವ ಖಾದರ್

Update: 2018-07-14 20:11 IST

ಉಡುಪಿ, ಜು.14: ಕಳೆದ ನಾಲ್ಕು ವರ್ಷಗಳಲ್ಲಿ ಉದ್ಯೋಗ ಸೃಷ್ಠಿ ಮಾಡುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರ ಯುವ ಜನತೆ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದಿರುವ ಶಿಕ್ಷಣ ಸಾಲವನ್ನು ಮನ್ನಾ ಮಾಡಬೇಕು ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಉಡುಪಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಸಿಗದೆ ಯುವ ಜನತೆಗೆ ಬ್ಯಾಂಕ್ ಸಾಲ ಪಾವತಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕಿ ನವರು ಬಡವರ ಮನೆಗೆ ಬಂದರು ಬೆದರಿಸಿ, ಕಿರುಕುಳ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಯುವ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸುವ ಬಿಜೆಪಿ ಶಾಸಕರಿಗೆ ಬಜೆಟ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ಗೆ ಹೆಚ್ಚುವರಿಯಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತೊಮ್ಮೆ ಬಜೆಟ್ ಮಂಡಿಸಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ಮೀನುಗಾರಿಕೆ ಸೇರಿದಂತೆ ಒಟ್ಟು 400 ಕೋಟಿ ರೂ. ಯೋಜನೆಗಳನ್ನು ಕರಾವಳಿಗೆ ನೀಡಲಾಗಿದೆ. ಈ ಎರಡು ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಮುಂದಿನ ಎಂಟು ತಿಂಗಳಲ್ಲಿ ಪೂರೈಸುವ ಜವಾಬ್ದಾರಿ ಕರಾವಳಿಯ ಶಾಸಕರುಗಳ ಮೇಲಿದೆ. ಅದು ಬಿಟ್ಟು ಅವರು ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಕೇಂದ್ರ ಸರಕಾರ ಮೀನುಗಾರಿಕೆಗೆ ಸೀಮೆಎಣ್ಣೆ ಯಾಕೆ ನೀಡುತ್ತಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರು ಪ್ರಶ್ನಿಸಲಿ. ಕೇಂದ್ರ ಸರಕಾರ ಸೀಮೆಎಣ್ಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ರಾಜ್ಯ ಸರಕಾರ ವರ್ಷಕ್ಕೆ 53 ಕೋಟಿ ರೂ. ಖರ್ಚು ಮಾಡಿ ಸೀಮೆಎಣ್ಣೆಯನ್ನು ಮೀನುಗಾರರಿಗೆ ನೀಡುತ್ತಿದೆ. ಗುಜರಾತಿನಲ್ಲಿ ಮೀನುಗಾರರಿಗೆ ನೀಡುವ ಸೌಲಭ್ಯಗಿಂತ ಹೆಚ್ಚಿನ ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಅವರು ತಿಳಿಸಿದರು.

ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷರು ಸರಿಯಾದ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈ ಕುರಿತು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈ ಸರಕಾರ ಐದು ವರ್ಷ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ಸಚಿವ ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News