×
Ad

ರಾಜಕಾರಣಿ, ಅಧಿಕಾರಿಗಳಿಂದ ದೇಶ ಬಲಿಷ್ಠವಾಗದು: ಸಚಿವ ಯು.ಟಿ.ಖಾದರ್

Update: 2018-07-14 20:47 IST

ಉಡುಪಿ, ಜು.14: ರಾಜಕಾರಣಿಗಳಿಂದ ಹಾಗೂ ಅಧಿಕಾರಿಗಳಿಂದ ದೇಶ ಬಲಿಷ್ಠವಾಗದು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಲಿಷ್ಠವಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಸಂತೋಷಗಳನ್ನು ಹಂಚಿಕೊಳ್ಳುವ ಮನಸ್ಸುಗಳು ಹೆಚ್ಚಾಗಬೇಕು. ವಿಶ್ವಾಸಭರಿತ ಸಮಾಜವನ್ನು ಕಟ್ಟಬೇಕು ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ಚಿಣ್ಣರ ಸಂತರ್ಪಣೆಯ 100 ಶಾಲೆಗಳ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಉಡುಪಿಯ ಶ್ರೀಕೃಷ್ಣ ಮಠ ದೇಶಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದು, ಧಾರ್ಮಿಕತೆ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಶಕ್ತಿ ಕೇಂದ್ರವಾಗಿದೆ ಎಂದವರು ಹೇಳಿದರು.

ಸರಕಾರಿ ಶಾಲೆ ಮುಚ್ಚಬಾರದು: ಅರ್ಚಕರಿಲ್ಲದಿದ್ದರೆ ದೇವಸ್ಥಾನಕ್ಕೆ ಬೀಗ ಹಾಕದೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ, ಅಧ್ಯಾಪಕರಿಲ್ಲ, ವಿದ್ಯಾರ್ಥಿಗಳಿಲ್ಲ ಎಂಬ ನೆಪದಲ್ಲಿ ಸರಕಾರಿ ಶಾಲೆಯನ್ನು ಮುಚ್ಚದೆ ಪ್ರತಿ ಶಾಸಕರು 10 ಅಧ್ಯಾಪಕರನ್ನು ಒದಗಿಸಿದರೆ, ಕನ್ನಡ ಶಾಲೆಗಳು ಚೆನ್ನಾಗಿ ನಡೆಯುತ್ತವೆ ಎಂದು ಆಶೀರ್ವಚನ ನೀಡಿದ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ವಿಗ್ರಹ ಮತ್ತು ಮಕ್ಕಳ ಮೂಲಕ ದೇವರ ಪೂಜೆಯನ್ನು 2 ರೀತಿಯಲ್ಲಿ ಮಾಡಬಹುದು. ಸರಕಾರಕ್ಕೆ ಕನ್ನಡ ಶಾಲೆ ಮುನ್ನಡೆಸಲು ಸಾಧ್ಯವಾಗದಿದ್ದರೆ ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟಕ್ಕೆ ಬಿಟ್ಟುಕೊಡುವುದು ಒಳಿತು ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಕನ್ನಡ ಅನುದಾನಿತ ಶಾಲೆಗಳ ಉಳಿವಿನಲ್ಲಿ ಮಠದ ಚಿಣ್ಣರ ಸಂತರ್ಪಣೆ ಪ್ರಮುಖ ಪಾತ್ರ ವಹಿಸಿದೆ. ಸಿಇಟಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಮಾತ್ರ ಕನ್ನಡ ಶಾಲೆ ಉಳಿವು ಸಾಧ್ಯ ಎಂದರು.

ಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುಕುಮಾರ್ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ದಿವಾನ ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು. ತೆಲಂಗಾಣದ ಲೋಕಸಭಾ ಸದಸ್ಯ ಸಂತೋಷ್ ಕುಮಾರ್ ಚಿಣ್ಣರ ಸಂತರ್ಪಣೆಗೆ 5 ಲಕ್ಷ ರೂ. ದೇಣಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News