ಉಡುಪಿ ಜಿಲ್ಲಾ ಮಟ್ಟದ ರೋವರ್-ರೇಂಜರ್ ಕಾರ್ಯಾಗಾರ
ಉಡುಪಿ, ಜು.14: ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸ್ಕೌಟ್ ಮತ್ತು ಗೈಡ್‌ನ ಹಿರಿಯ ವಿಭಾಗವಾದ ರೋವರ್ ಮತ್ತು ರೇಂಜರ್ ಈಗಾಗಲೇ ಪ್ರಾರಂಭಗೊಂಡಿದ್ದು, ಈ ಘಟಕಗಳ ಸಂಯೋಜಕರಿಗೆ ಜಿಲ್ಲಾ ಮಟ್ಟ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಖ್ಯಾತ ಶಿಕ್ಷಣ ತಜ್ಞ ಹಾಗೂ ಉಡುಪಿ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಹಾಬಲೇಶ್ವರ ರಾವ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಕಾಲೇಜು ಹಂತದಲ್ಲಿ ರೋವರ್- ರೇಂಜರ್ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣೆಗೆಗೆ ಪೂರಕವಾಗಿದೆ. ಹೊರ ಜಗತ್ತನ್ನು ತಿಳಿದುಕೊಳ್ಳಲು ಹಾಗೂ ಮಾನಸಿಕ, ದೈಹಿಕ, ಭೌತಿಕ ಹಾಗೂ ಆಧ್ಯಾತ್ಮಿಕವಾಗಿ ಸಧೃಢಗೊಳ್ಳಲು ಸ್ಕೌಟ್ಸ್-ಗೈಡ್ಸ್ ಉತ್ತಮ ಆಯ್ಕೆಯಾಗಿದೆ ಎಂದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ ಮಾತನಾಡಿ, ಪರೋಪಕಾರವನ್ನು ಎಲ್ಲರೂ ಮೈಗೂಡಿಸಿಕೊಂಡರೆ ಜಗತ್ತು ಸುಖಮಯವಾಗಿರುವುದು. ತನಗೆ ಸ್ಕೌಟ್ಸ್-ಗೈಡ್ಸ್‌ನೊಂದಿಗೆ 45 ವರ್ಷಗಳ ಬಾಂಧವ್ಯವಿದ್ದು, ಪುಟ್ಟ ಮಕ್ಕಳೊಂದಿಗೆ ಮಕ್ಕಳಾಗಿರುವುದೇ ಒಂದು ಸಂತೋಷ ಎಂದರು.
ವೇದಿಕೆಯಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ.ಪೈ, ಜಿಲ್ಲಾ ಸ್ಥಾನಿಯ ಆಯುಕ್ತ ಪ್ರೊ.ದಯಾನಂದ ಶೆಟ್ಟಿ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ. ವಿಜಯೇಂದ್ರ ರಾವ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಐ.ಕೆ.ಜಯಚಂದ್ರ ಸ್ವಾಗತಿಸಿ, ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಬಿ.ಆನಂದ ಅಡಿಗ ಕಾರ್ಯಕ್ರಮದ ಮುನ್ನೋಟ ನೀಡಿದರು. ಜಿಲ್ಲಾ ಗೈಡ್ಸ್ ತರಬೇತಿ ಅಯುಕ್ತೆ ಸಾವಿತ್ರಿ ಮನೋಹರ್ ವಂದಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಡಾ. ಜಯರಾಮ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನಿಂದ 30 ಉಪನ್ಯಾಸಕರು ಭಾಗವಹಿಸಿ ದ್ದರು. ಕಾರ್ಯಕ್ರಮವನ್ನು ಜಿಲ್ಲಾ ಸಂಘಟಕರಾದ ನಿತಿನ್ ಅಮಿನ್ ಹಾಗೂ ಸುಮನ್ ಶೇಖರ್ ಸಂಘಟಿಸಿದರು.