ಹಿರಿಯಡ್ಕ: ಪ್ಲಾಸ್ಟಿಕ್ ನಿಷೇಧ ಜಾಗೃತಿ ಆಂದೋಲನ
ಉಡುಪಿ, ಜು.14: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಮತ್ತು ಬೊಮ್ಮರಬೆಟ್ಟು ಗ್ರಾಪಂಗಳ ಜಂಟಿ ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಆಂದೋಲನ ಕಾರ್ಯಕ್ರಮ ಶುಕ್ರವಾರ ಹಿರಿಯಡಕದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಮಾತನಾಡಿ ಪ್ಲಾಸ್ಟಿಕ್ ನಿಷೇಧದಂತಹ ಮಹತ್ವಕಾಂಕ್ಷಿ ಕಾರ್ಯಕ್ರಮ ಯಶಸ್ವಿಯಾಗ ಬೇಕಾದರೆ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಹಿರಿದಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಪ್ರತಿಜ್ಞಾ ರೂಪದಲ್ಲಿ ಕೈಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಬಿ.ಆಚಾರ್ಯ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ್ವಚ್ಛ ಭಾರತ್ ಅಭಿಯಾನದ ಉಡುಪಿ ಜಿಲ್ಲಾ ಸಂಯೋಜಕ ರಘುನಾಥ ಪ್ರಾತ್ಯಕ್ಷಿಕೆ ಯೊಂದಿಗೆ ಪ್ಲಾಸ್ಟಿಕ್ ನಿಷೇಧದ ಅಗತ್ಯ ಮತ್ತು ತ್ಯಾಜ್ಯ ನಿರ್ವಹಣೆಯ ವಿವಿಧ ಹಂತಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಬೊಮ್ಮರಬೆಟ್ಟು ಗ್ರಾಪಂ ಪಿಡಿಒ ರಾಜಶೇಖರ್ ರಾವ್ ಸ್ವಾಗತಿಸಿ, ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಪಿ ಕೆ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕ ಸಜಯಾ ಕೆ.ಎಸ್. ಉಪಸ್ಥಿತರಿದ್ದರು. ರಾ.ಸೇ. ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.