ಬೆಳ್ತಂಗಡಿ: ಎರಡನೇ ದಿನವೂ ಮುದುವರಿದ ಪೌರಕಾರ್ಮಿಕರ ಪ್ರತಿಭಟನೆ
ಬೆಳ್ತಂಗಡಿ, ಜು. 14: ಪಟ್ಟಣ ಪಂಚಾಯತ್‌ನಲ್ಲಿ ಕಸ ವಿಲೇವಾರಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶುಕ್ರವಾರದಿಂದ ಕೆಲಸಕ್ಕೆ ಹಾಜರಾಗದೇ ಮುಷ್ಕರ ಹೂಡಿದ್ದು, 2ನೇ ದಿನವೂ ಮುಂದುವರಿದಿದೆ.
ಪೌರ ಕಾರ್ಮಿಕರ ಮುಷ್ಕರದಿಂದ, ನಗರದ ಅಲ್ಲಲ್ಲಿ ಕಸ ರಾಶಿ ಬಿದ್ದಿದೆ. ನಿರಂತರ ಮಳೆಯಾಗುತ್ತಿದ್ದು ದುರ್ನಾತ ಬೀರಲಾರಂಭಿಸಿದೆ. ಪ್ರತಿಭಟನೆ ನಡೆಸುತ್ತಿರುವ 12 ಮಂದಿ ಕಾರ್ಮಿಕರು ಶನಿವಾರ ಪಟ್ಟಣ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಮುಷ್ಕರ ನಡೆಸಿದರು. ಆದರೆ 2ನೇ ಶನಿವಾರ ಆದ ಕಾರಣ ಸರ್ಕಾರಿ ರಜೆಯಾಗಿದ್ದು, ಅಧಿಕಾರಿಗಳು ಯಾರೂ ಬಂದಿಲ್ಲ.
ಶಾಸಕ ಪೂಂಜ ಭೇಟಿ: ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಮುಷ್ಕರ ನಿರತ ಪೌರ ಕಾರ್ಮಿಕರನ್ನು ಶಾಸಕ ಹರೀಶ ಪೂಂಜ ಹಾಗೂ ತಹಶೀಲ್ದಾರ್ ಮದನ್ ಮೋಹನ್ ಸ್ಥಳಕ್ಕೆ ಭೇಟಿ ಅವರ ಸಮಸ್ಯೆಯನ್ನು ಆಲಿಸಿದರು. ತಮ್ಮ ಬೇಡಿಕೆಯುಳ್ಳ ಮನವಿಯನ್ನು ಶಾಸಕರಿಗೆ ಪೌರ ಕಾರ್ಮಿಕರು ನೀಡಿದರು. ತಕ್ಷಣ ಇವರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಶಾಸಕರು ತಹಶೀಲ್ದಾರಿಗೆ ಸೂಚಿಸಿದರು. ತಮ್ಮ ಸಮಸ್ಯೆಗೆ ಪರಿಹಾರ ದೊರಕುವವರೆಗೆ ಕೆಲಸಕ್ಕೆ ಹಾಜರಾಗದೇ ಮುಷ್ಕರ ಮುಂದುವರಿಸುವುದಾಗಿ ಕಾರ್ಮಿಕರು ತಿಳಿಸಿದರು.
ಮಾಹಿತಿ ಕೊರತೆಯಿಂದಾಗಿ ಸಮಸ್ಯೆ: ಪೌರ ಕಾರ್ಮಿಕರಿಗೆ ಮಾರ್ಚ್ ತನಕ ಗುತ್ತಿಗೆದಾರರ ಮೂಲಕ ವೇತನ ಪಾವತಿಯಾಗುತ್ತಿದ್ದು, ಪ್ರಸ್ತುತ ಎಪ್ರಿಲ್ ಬಳಿಕ ಪಟ್ಟಣ ಪಂಚಾಯತ್ ನೇರವಾಗಿ ವೇತನ ನೀಡುತ್ತಿದೆ. ಹೀಗಾಗಿ ಮುಖ್ಯಾಧಿಕಾರಿಗಳ ಖಾತೆಗೆ ಜಮೆಯಾಗಿ ವಾರದೊಳಗೆ ಅವರ ಹಣ ಖಾತೆಗೆ ಬೀಳುತ್ತದೆ. ಇಎಸ್‌ಐ ಹಾಗೂ ಪಿಎಫ್ ಕಟ್ಟಲಾಗಿದೆ. ಸರಕಾರದ ಮಾನದಂಡದಂತೆ ವೇತನ ನೀಡಲಾಗುತ್ತಿದೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವೇತನದ ಬಗ್ಗೆ ಇರುವ ಮಾಹಿತಿಯ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಈ ಕುರಿತು ಕಾರ್ಮಿಕರಿಗೆ ಮನವರಿಕೆ ಮಾಡಲಾಗಿದ್ದು, ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದೇನೆ ಎಂದು ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ತಿಳಿಸಿದ್ದಾರೆ.