ಕಾಪು: ಕೈಪುಂಜಾಲಿನಲ್ಲಿ ಕಡಲ್ಕೊರೆತ
Update: 2018-07-14 21:45 IST
ಕಾಪು, ಜು. 14: ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಯಿಂದ ಕಡಲು ಪ್ರಕ್ಷುಬ್ದಗೊಂಡಿದ್ದು, ಕಾಪು ಪುರಸಭಾ ವ್ಯಾಪ್ತಿಯ ಕೈಪುಂಜಾಲಿನಲ್ಲಿ ಸಮುದ್ರ ಕೊರೆತ ಕಾಣಿಸಿಕೊಂಡಿದೆ.
ಎರ್ಮಾಳು, ಮೂಳೂರು, ಉಚ್ಚಿಲದಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದ್ದು, ಕೈಪುಂಜಾಲಿನ ನಿತ್ಯಾನಂದ ಭಜನಾ ಮಂದಿರದ ಬಳಿ ತೀವ್ರಗೊಂಡಿದೆ. ಸಮುದ್ರದ ಅಲೆಗಳು ತಡೆಗೋಡೆಗೆಂದು ಹಾಕಲಾದ ಬಂಡೆಗಳಿಗೆ ಬಡಿಯುತಿದ್ದು, ಬಂಡೆಗಳು ಸಮುದ್ರ ಪಾಲಾಗುತ್ತಿವೆ. ಈ ಪ್ರದೇಶದಲ್ಲಿ ಅತಿಥಿ ಗೃಹವೊಂದು ಇದ್ದು, ಅಪಾಯದ ಸ್ಥಿತಿಯಲ್ಲಿದೆ. ಹಲವಾರು ತೆಂಗಿನ ಮರಗಳು ಅಪಾಯದಲ್ಲಿವೆ. ಸ್ಥಳಕ್ಕೆ ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿದ್ದು, ಕಡಲ್ಕೊರೆತ ಪ್ರದೇಶಕ್ಕೆ ಕಲ್ಲುಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.