ಬೆಳೆನಾಶ, ಸಾಲ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಮೂರು ತಿಂಗಳಲ್ಲಿ 639 ರೈತರ ಆತ್ಮಹತ್ಯೆ
ಹೊಸದಿಲ್ಲಿ, ಜು.14: ಸಾಲಬಾಧೆ, ಫಸಲು ತೆಗೆಯುವಲ್ಲಿ ವೈಫಲ್ಯ ಹಾಗೂ ಬ್ಯಾಂಕ್‌ಗಳ ಸಾಲ ಮರುಪಾವತಿ ಮಾಡಲು ವಿಫಲವಾಗಿರುವ ಕಾರಣದಿಂದ ಈ ವರ್ಷದ ಮಾರ್ಚ್‌ನಿಂದ ಮೇಯ ಮೂರು ತಿಂಗಳ ಅವಧಿಯಲ್ಲಿ 639 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಧನಂಜಯ್ ಮುಂಡೆ ಹಾಗೂ ಇತರ ಎನ್‌ಸಿಪಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಪಾಟೀಲ್ ಈ ಮಾಹಿತಿಯನ್ನು ನೀಡಿದ್ದಾರೆ. ಮಾರ್ಚ್ 1ರಿಂದ ಮೇ 31, 2018ರ ವರೆಗೆ 639 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪೈಕಿ 188 ರೈತರ ಕುಟುಂಬಗಳು ಬೆಳೆ ವೈಫಲ್ಯ, ಸಾಲ ಮತ್ತು ಬ್ಯಾಂಕ್ ಸಾಲ ಮರುಪಾವತಿಸುವಲ್ಲಿ ಅಸಮರ್ಥತೆ ಮುಂತಾದ ವ್ಯಾಪ್ತಿಯಡಿ ಸರಕಾರದ ವತಿಯಿಂದ ನೀಡಲಾಗುವ ಪರಿಹಾರಕ್ಕೆ ಅರ್ಹವಾಗಿವೆ ಎಂದು ಪಾಟೀಲ್ ತಿಳಿಸಿದ್ದಾರೆ. 188 ಕುಟುಂಬಗಳ ಪೈಕಿ 174 ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 122 ಪ್ರಕರಣಗಳು ಪರಿಹಾರ ನೀಡಲು ಅನರ್ಹಗೊಂಡಿವೆ. 329 ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮುಂಡೆ, ಸಾಲಮನ್ನಾ, ಬೆಳೆ ವೈಫಲ್ಯಕ್ಕೆ ಪರಿಹಾರ ಹಾಗೂ ಕನಿಷ್ಟ ಬೆಂಬಲ ಬೆಲೆ ಹೀಗೆ ಸರಕಾರದ ಎಲ್ಲ ಯೋಜನೆಗಳು ವಿಫಲವಾಗಿವೆ. ಇದರ ಫಲವಾಗಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 13,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 1500 ರೈತರು ಕಳೆದ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.