ಬೈಕ್ ಸವಾರನಿಗೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಜು.14: ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರನೇ ಈ ಘಟನೆಗೆ ಕಾರಣ ಎಂಬ ನೆಪದಲ್ಲಿ ಆ ಬೈಕ್ ಸವಾರನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಅಡಂಕುದ್ರು ನಿವಾಸಿಗಳಾದ ರೆನಿಶ್ ಫೆರಾವೋ (23) ಹಾಗೂ ಡ್ಯಾನಿ ಡಿಸೋಜ (28) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಅನಿಲ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಶುಕ್ರವಾರ ರಾತ್ರಿ 11 ಗಂಟೆಗೆ ಮದ್ಯ ಸೇವಿಸಿದ ಆರೋಪಿಗಳು ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಬೆಂದೂರ್‌ವೆಲ್‌ನಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭ ಹಿಂದಿನಿಂದ ವಾಮಂಜೂರಿನ ಪ್ರದೀಪ್ ಎಂಬವರು ಬೈಕ್‌ನಲ್ಲಿ ಹೋಗುತ್ತಿದ್ದು, ಅಪಘಾತಕ್ಕೆ ಅವರೇ ಕಾರಣ ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ಇದನ್ನು ನೋಡಿ ಸ್ಥಳೀಯರು ಸೇರಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.