×
Ad

ಬಿಜೆಪಿ ಹಿಂದೂ ಧರ್ಮದ ಜನರಿಗೆ ಏನು ಕಾರ್ಯಕ್ರಮ ಅನುಷ್ಟಾನಿಸಿದೆ: ಪ್ರಮೋದ್ ಮಧ್ವರಾಜ್

Update: 2018-07-15 22:32 IST

ಕಾಪು, ಜು. 15: ಬಿಜೆಪಿ ಕಳೆದ ಚುನಾವಣೆಯಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಮತಪಡೆದು ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ನಾಲ್ಕು ವರ್ಷಗಳಲ್ಲಿ ಸರ್ಕಾರ ನಡೆಸಿದ್ದಾರೆ. ಆದರೆ ಹಿಂದೂ ಧರ್ಮದವರಿಗೆ ಏನು ಕಾರ್ಯಕ್ರಮ ಅನುಷ್ಟಾನಿಸಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದ್ದಾರೆ.

ರವಿವಾರ ಕಾಪುವಿನ ರಾಜೀವ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯು ರವಿವಾರ ಹಮ್ಮಿಕೊಂಡ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಅವಮಾನಿಸುವುದು, ಬೈಯ್ಯುವುದು, ಸಂಶಯ ದೃಷ್ಟಿಯಿಂದ ನೋಡುವುದು, ಅವರನ್ನು ಸಮಾಧಿಯನ್ನಾಗಿ ಮಾಡುವುದು ಬಿಟ್ಟರೆ ಹಿಂದೂಗಳಿಗಾಗಿ ಪ್ರತ್ಯೇಕವಾದ ಕಾರ್ಯಕ್ರಮ ಏನೂ ಮಾಡಲಿಲ್ಲ ಎಂದರು.

ಕೇವಲ ಅಪಪ್ರಚಾರಕ್ಕೆ ಹುಟ್ಟಿದ ಪಕ್ಷ ಇದ್ದರೆ ಅದು ಬಿಜೆಪಿ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡಿ ಜನರನ್ನು ತಲೆ ಕೆಡಿಸಿ ಇವತ್ತು ಚುನಾವಣೆ ಗೆಲ್ಲುವ ತಂತ್ರವನ್ನು ಬಿಜೆಪಿ ಮಾಡಿದೆ. ಇಲ್ಲಿನ ಜನ ಬಹಳ ಬುದ್ಧಿವಂತರು ಒಮ್ಮೆ ಮೋಸ ಹೋಗುತ್ತಾರೆ. ನಿರಂತರವಾಗಿ ಮೋಸ ಹೋಗುವುದಿಲ್ಲ. ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿಯವರು ಕೇವಲ ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಎದುರಿಸಿದ್ದಾರೆ. ಅಭ್ಯರ್ಥಿಗಳ ಪರವಾಗಿ ಮತ ಕೇಳಲಿಲ್ಲ. ಅಭ್ಯರ್ಥಿಗಳ ಪರ ಮತಕೇಳಿದರೆ ಆಗುವುದಿಲ್ಲ ಎಂಬುವುದು ಅವರಿಗೂ ಗೊತ್ತು. ದೂರದ ಮೋದಿಯನ್ನು ತೋರಿಸಿ ಇವತ್ತು ನಮ್ಮನ್ನು ಸೋಲಿಸುವ ಕೆಲಸ ಆಗಿದೆ.

ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲೆಗೆ ಏನು ಕೊಡುವ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು ಉಡುಪಿ ಜಿಲ್ಲೆಗೆ ಅನ್ಯಾಯವಾಗಿದೆ ಎನ್ನುವ ಜನಪ್ರತಿನಿಧಿಗಳು ಬಜೆಟ್‌ಗೂ ಮುನ್ನ ಇಲ್ಲಿನ ಬೇಡಿಕೆಗಳನ್ನು ಸಲ್ಲಿಸಬೇಕಾಗಿತ್ತು. ಆದರೆ ಅದನ್ನು ಮಾಡದೆ ಕೇವಲ ಅಪಪ್ರಚಾರ ಮಾಡಲು ಕೊನೆ ಗಳಿಗೆಯಲ್ಲಿ ಬೇಡಿಕೆ ಪಟ್ಟಿ ಸಲ್ಲಿವುಸ ಮೂಲಕ ಉಡುಪಿಗೆ ಏನೂ ಸಿಗದಂತೆ ಮಾಡಿದ್ದಾರೆ. ಇದೆಲ್ಲಾ ಬಿಜೆಪಿಯವರ ತಂತ್ರವಾಗಿದೆ. ಪೆಟ್ರೋಲ್ ದರ ಏರಿಕೆಯಾದಾಗ ಬೀದಿಯಲ್ಲಿ ಪ್ರತಿಭಟಿಸುತಿದ್ದ ಬಿಜೆಪಿಗರು ಈಗ ಪ್ರತಿನಿತ್ಯ ದರ ಏರಿಕೆಯಾದಾಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಮಧ್ವರಾಜ್ ಇದನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಶ್ನಿಸಬೇಕಾಗಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಈ ಭಾರಿ ಕಾಪು ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಲ್ಲದೆ ರಾಜ್ಯದ ಇತಿಹಾಸದಲ್ಲೇ ಜನಪರ ಯೋಜನೆಗಳನ್ನು ಸಿದ್ದರಾಮಯ್ಯನವರು ತಂದಿದ್ದಾರೆ. ಆದರೆ ಈ ಎಲ್ಲಾ ಕಾರ್ಯಗಳು ಬಿಜೆಪಿಯ ಅಪಪ್ರಚಾರದಿಂದ ಫಲಕಂಡಿಲ್ಲ. ಪಕ್ಷೆ ಎಲ್ಲಾ ಮುಖಂಡರು ಜಿಲ್ಲೆಯಲ್ಲಿ ಸಂಘಟಿತರಾಗಿ ಮುಂದಿನ ಚುನಾವಣೆಗೆ ತಯಾರಾಗಬೇಕು. ಇದಕ್ಕಾಗಿ ಕಾರ್ಯಕರ್ತರಿಗೂ ಶಕ್ತಿ ತುಂಬುವ ಕೆಲಸ ಆಗಬೇಕಾಗಿದೆ ಎಂದರು.

ಸೇವಾ ಕೇಂದ್ರ: ಸರ್ಕಾರದ ಯೋಜನೆಗಳು ಜನರಿಗೆ ಸಿಗುವಂತಾಗಲು ಪ್ರತಿಯೊಂದು ಗ್ರಾಮೀಣ ಮಟ್ಟದಲ್ಲೂ ಪಕ್ಷದಿಂದ ಸೇವಾ ಕೇಂದ್ರಗಳನ್ನು ತೆರೆಯಬೇಕಾಗಿದೆ. ಈ ಮೂಲಕ ಪಕ್ಷದ ಕಾರ್ಯಕರ್ತರು ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಅಪಪ್ರಚಾರಗಳನ್ನು ನಡೆಸಿದ ಬಿಜೆಪಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಹೊಸ ತಂತ್ರಗಾರಿಕೆಯನ್ನು ಈಗಿಂದಲೇ ನಡೆಸುತ್ತಿದೆ. ಒಂದು ಮನೆಗೆ ಐದು ಲಕ್ಷ ರೂ. ನರೇಂದ್ರ ಮೋದಿ ಸರ್ಕಾರ ನೀಡುತ್ತದೆ ಎಂದು ಪ್ರಚಾರ ಪಡಿಸುತಿದ್ದು. ಈ ಮೊದಲು ಹೇಳಿದ ಎಷ್ಟು ಭರವಸೆಗಳನ್ನು ಈಡೇರಿಸಿದೆ ಎಂದು ಅವರು ಪ್ರಶ್ನಿಸಿದರು.

ನಾವು ಜಾತ್ಯಾತೀತರು: ಎಐಸಿಸಿಯ ಅಮೃತ್ ಶೆಣೈ ಮಾತನಾಡಿ, ನಾವು ಹಿಂದೂಗಳಲ್ಲ ನಾವು ಜಾತ್ಯಾತೀತರು. ಕೋಮುವಾದ ಮತ್ತು ಜಾತ್ಯಾತೀತ ವೈಚಾರಿಕ ಯುದ್ಧಗಳಾಗಿದೆ. ಜಾತ್ಯಾತೀತ ವಾದ ಎಂದರೆ ಅಲ್ಪಸಂಖ್ಯಾತರ ಓಲೈಕೆ ಎಂದು ಬಿಜೆಪಿ ಯುವಕರಲ್ಲಿ ತಪ್ಪು ಸಂದೇಶ ನೀಡುತ್ತಿದೆ. ಜಾತ್ಯಾತೀತ ಅಂದರೆ ಜಾತಿಧರ್ಮವನ್ನು ಮೀರಿ ಪ್ರೀತಿಸುವಂತದ್ದು ಎಂದರು. ಕಾಂಗ್ರೆಸ್‌ನವರಿಗೆ ತಂತ್ರಗಾರಿಕೆ, ಕುತಂತ್ರಗಾರಿಕೆ ಗೊತ್ತಿಲ್ಲ. ಸತ್ಯವನ್ನು ಜೋರಾಗಿ ಹೇಳೋಣ. ಮೋದಿ ಸರ್ಕಾರದ ವೈಫಲ್ಯವನ್ನು ಮನೆ ಮನೆಗೆ ತಲುಪಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಅಭಿವೃದ್ಧಿಗೆ ಮತ ನೀಡುವುದಿಲ್ಲ ಎಂಬುವುದಕ್ಕೆ ಇವತ್ತು ಜೀವಂತ ಸಾಕ್ಷಿ. ಸಂಕುಚಿತ ಮನೋಭಾವಗಳನ್ನು ವೈಭವೀಕರಿಸುವ ಮೂಲಕ ಇವತ್ತು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಮೂಲಕ ಜನರನ್ನು ದಿಕ್ಕಿ ತಪ್ಪಿಸುವ ಕರಾವಳಿಯಲ್ಲಿ ನಡೆದಿದೆ. ಈ ಬಗ್ಗೆ ಗಂಭೀರ ಆತ್ಮಾವಲೋಕನ ಮಾಡುವುದು ಒಳ್ಳೆಯದು ಎಂದರು.

ಉಡುಪಿ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಮೋದ್ ಮಧ್ವರಾಜ್, ಪ್ರತಾಪ್‌ಚಂದ್ರ ಶೆಟ್ಟಿ, ರಾಕೇಶ್ ಮಲ್ಲಿ, ವೆರೋನಿಕ ಕರ್ನೋಲಿಯೋ, ದೇವಿಪ್ರಸಾದ್ ಶೆಟ್ಟಿ, ಮುರಳೀಧರ ಶೆಟ್ಟಿ, ಗೀತಾ ವಾಗ್ಲೆ, ಅಶೋಕ್ ಕೊಡವೂರು, ಅಬ್ದುಲ್ ಅಝೀಝ್ ಹೆಜಮಾಡಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ವಿಶ್ವಾಸ್ ಅಮೀನ್, ಅಮೀರ್ ಕಾಪು, ನವೀನ್ ಶೆಟ್ಟಿ, ವಿನಯ ಬಳ್ಳಾಲ್ ಉಪಸ್ಥಿತರಿದ್ದರು.

ಐಎಸ್‌ಪಿಆರ್‌ಎಲ್ ಉದ್ಘಾಟನೆಗೆ ವಿರೋಧ: ಸರಿಯಾದ ಪರಿಹಾರ ದೊರಕದೆ ಮುಂದಿನ ತಿಂಗಳು ಪಾದೂರಿನ ಐಎಸ್‌ಪಿಆರ್‌ಎಲ್ ಯೋಜನೆಯನ್ನು ಉದ್ಘಾಟಿಸಲು ಕೇಂದ್ರ ಸರ್ಕಾರ ಮುಂದಾದರೆ ಇದರ ವಿರುದ್ಧ ಪ್ರತಿಭಟನೆ ಮಾಡಲಾಗುವುದು. ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಇರಬೇಕು. ಈ ಮೂಲಕ ಜನರಿಗೆ ನ್ಯಾಯ ಒದಗಿಸಬೇಕು. ಈಗಾಗಲೇ ಪಾದೂರು ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News