×
Ad

ಬಂಟ್ವಾಳ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ

Update: 2018-07-16 18:00 IST

ಬಂಟ್ವಾಳ, ಜು. 16: ವಿವಿಧ ಯೋಜನೆಗಳಲ್ಲಿ ವಿತರಿಸಲಾಗುತ್ತಿರುವ ಅಕ್ಕಿ, ಗೋಧಿ ಹಾಗೂ ಇನ್ನಿತರ ಸರಕುಗಳನ್ನು ರಾಜ್ಯ ಸರಕಾರ ಬೇರೆ ರಾಜ್ಯಗಳಿಂದ ಆಮದು ಮಾಡುತ್ತಿರುವುದು ಬೇಸರ ತಂದಿದೆ ಎಂದು ಶಾಸಕ ರಾಜೇಶ್ ನಾಯ್ಕಿ ಉಳಿಪ್ಪಾಡಿಗುತ್ತು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಪಂಚಾಯತ್-ಕೃಷಿ ಇಲಾಖೆ ಇದರ ವತಿಯಿಂದ ಬಿ.ಸಿ.ರೋಡ್ ಸ್ತ್ರೀ ಶಕ್ತಿ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ "ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಮತ್ತು ಬಂಟ್ವಾಳ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರವು ವಿವಿಧ ಫಲಾನುಭಗಳಿಗೆ ನೀಡುವ ಅಕ್ಕಿ, ಗೋಧಿ, ಧಾನ್ಯಗಳಲ್ಲಿ ಶೇ.100ರಲ್ಲಿ 80ರಷ್ಟು ಹೊರ ಜಿಲ್ಲೆಗಳಿಂದ ಆಮದು ಮಾಡುವ ಬದಲು ರಾಜ್ಯದಲ್ಲಿಯೇ ಇದನ್ನು ಉತ್ಪಾದನೆ ಮಾಡಿದರೆ ಇಲ್ಲಿನ ರೈತರ ಬಾಳು ಹಸನಾಗಲು ಸಾಧ್ಯ. ರೈತರ ಆದಾಯ ದುಪ್ಪಟ್ಟುಗೊಂಡಾಗ ಭಾರತ ವಿಶ್ವಗುರು ಆಗಲಿದೆ ಎಂದವರು, ತಾನೊಬ್ಬ ರೈತ, ಕೃಷಿಕ ಎನ್ನುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಕೃಷಿ ಕಸುಬನ್ನು ಗೌರವಿಸುವುರ ಜೊತೆಗೆ ನಂಬಿಕೆಯಿಂದ ಕೆಲಸ ಮಾಡಿದರೆ ಕೃಷಿ ಲಾಭದಾಯಕವಾದ ಉದ್ಯೋಗವಾಗಲಿದೆ ಎಂದರು.

ರಾಜ್ಯ ಬಜೆಟ್‌ನಲ್ಲಿ ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನಕ್ಕೆ ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನು ಕೈ ಬಿಟ್ಟಿರುವುದು ಇಲ್ಲಿನ ಸಣ್ಣ ಹಿಡುವಳಿದಾರರ ರೈತರಿಗೆ ಮಾಡಿದ ಅನ್ಯಾಯವಾಗಿದೆ. ಇಸ್ರೇಲ್ ಮಾದರಿಯ ಕೃಷಿಗೆ ಅವಳಿ ಜಿಲ್ಲೆಗಳನ್ನು ಸೇರಿಸಬೇಕೆಂದು ಮುಖ್ಯಮಂತ್ರಿ ಅವರೊಂದಿಗೆ ಮನವಿ ಮೂಲಕ ಒತ್ತಾಯಿಸಿದ್ದು, ಈ ಬಗ್ಗೆ ಸಭೆ ಕರೆಯುವ ಭರವಸೆ ನೀಡಿರುವುದಾಗಿ ಅವರು ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಡಾ. ಆಂಟನಿ ಮರಿಯಾ ಇಮಾನ್ಯುವಲ್ ಅವರು ಪ್ರಸ್ತಾವಿಸಿದರು. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ.ಇಬ್ರಾಹಿಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯ ಕಮಲಾಕ್ಷಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಹಶೀಲ್ದಾರ್ ಪುರಂದರ ಹೆಗ್ಡೆ, ತೋಟಗಾರಿಕಾ ಇಲಾಖೆಯ ದಿನೇಶ್, ಪ್ರಿಯಾಂಕಾ, ಹರೀಶ್ ಶೆಣೈ ಉಪಸ್ಥಿತರಿದ್ದರು.

ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಸ್ವಾಗತಿ, ಮಂಜು ವಿಟ್ಲ ವಂದಿಸಿದರು. ಕೃಷಿ ರಂಗದಲ್ಲಿ ವಿಶೇಷ ಸಾಧನೆಗೈದ ತಾಲೂಕಿನ ರೈತರಾದ ಪೂವಪ್ಪ, ಪದ್ಮನಾಭ ತುಂಬೆ, ಲಕ್ಷ್ಮೀ ತುಂಬೆ, ಪ್ರಫುಲ್ಲಾ ರೈ, ಚಂದ್ರಶೇಖರ, ನಿಶ್ಚಲ್ ಶೆಟ್ಟಿ, ಧನ್ಯಾ ಹಾಗೂ ರಾಮಣ್ಣ ಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸರಪಾಡಿ ಸಶೋಕ್ ಶೆಟ್ಟಿ ತಂಡದಿಂದ "ಅನ್ನದಾತನ ವಿಮೋಚನೆ" ಎಂಬ ಕಿರುನಾಟಕ ನಡೆಯಿತು.

ಸಭಾ ಕಾರ್ಯಕ್ರಮ ಬಳಿಕ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಮುಂಬಾಗದಲ್ಲಿ ಬಂಟ್ವಾಳ ಹೋಬಳಿ ಸಮಗ್ರ ಕೃಷಿ ಅಭಿಯಾನದ ವಾಹನ ಜಾಥಾಕ್ಕೆ ಶಾಸಕ ರಾಜೇಶ್ ನಾಯ್ಕೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News