ಕಾಪು: ಶಾಸಕರ ಕಚೇರಿ ಉದ್ಘಾಟನೆ
ಕಾಪು, ಜು. 16: ಕಾಪು ಪುರಸಭಾ ಕಚೇರಿಯಲ್ಲಿ ಸೋಮವಾರ ಶಾಸಕರ ನೂತನ ಕಚೇರಿಯನ್ನು ಬಿಜೆಪಿ ಹಿರಿಯ ಮುಖಂಡ ಸೋಮಶೇಖರ ಭಟ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಆರ್.ಮೆಂಡನ್, ಕಾಪು ಕ್ಷೇತ್ರದ ಜನರ ಸೇವಕನಾಗಿ ನಾನು ಪಕ್ಷ ಭೇದವಿಲ್ಲದೆ ಕೆಲಸ ನಿರ್ವಹಿಸುತ್ತೇನೆ. ಅಶಕ್ತರಿಗೆ ಶಕ್ತಿ ಕೊಡುವ ಕೆಲಸ ಶಾಸಕರ ಕಚೇರಿಯಿಂದ ನಡೆಯಲಿದೆ ಎಂದರು.
ಅಲ್ಪ ಸ್ಥಾನ ಗಳಿಸಿದ ಅಪವಿತ್ರ ಮೈತ್ರಿಯ ಸರಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚೆನಯಾಗುವ ಆಶಾಭಾವನೆ ಯಿದೆ. 2019ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹತ್ತರ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಿದೆ ಎಂದು ಲಾಲಾಜಿ ಹೇಳಿದರು.
ಸೋಮಶೇಖರ್ ಭಟ್ ಮಾತನಾಡಿ, ಸರಳ ಸಜ್ಜನಿಕೆಯ ಲಾಲಾಜಿ ಮೆಂಡನ್ ಕಾಪು ಕ್ಷೇತ್ರದ ಶಾಸಕರಾಗಿ ಕಾಪು ಜನತೆಗೆ ಐದು ವರ್ಷ ಜನಪರವಾಗಿ ಕೆಲಸ ಮಾಡಲಿ. ಕಾಪು ಕ್ಷೇತ್ರದಲ್ಲಿ ಪಕ್ಷ ಕಟ್ಟುವಲ್ಲಿ ಲಾಲಾಜಿ ಶ್ರಮವಹಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ ಕೊನೆಗಳಿಗೆಯಲ್ಲಿ ಅಭ್ಯರ್ಥಿಯಾದರೂ ಕಾರ್ಯಕರ್ತರ ನಾಗಲೋಟದಿಂದ ದಾಖಲೆ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಶಿಲ್ಪ ಜಿ ಸುವರ್ಣಾ, ತಾಲ್ಲೂಕು ಪಂಚಾಯತ್ ಸದಸ್ಯೆ ನೀತಾ ಗುರುರಾಜ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಎಸ್ ಕುಂದರ್, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಸಾದ್ ಕುತ್ಯಾರು, ಸಂದೀಪ್ ಶೆಟ್ಟಿ ಇದ್ದರು.