ಮುಷ್ಕರ ನಿರತ ಪೌರ ಕಾರ್ಮಿಕರ ಮನವೊಲಿಸುವಲ್ಲಿ ಯಶಸ್ವಿಯಾದ ಮಾಜಿ ಶಾಸಕ ಬಂಗೇರ

Update: 2018-07-16 13:16 GMT

ಬೆಳ್ತಂಗಡಿ, ಜು. 16: ವೇತನ ತಾರತಮ್ಯ ಹಾಗೂ ವಿವಿಧ ಬೇಡಿಕೆಯನ್ನು ಮುಂದಿರಿಸಿ ಕಳೆದ ನಾಲ್ಕು ದಿನಗಳಿಂದ ಕೆಲಸಕ್ಕೆ ಹಾಜರಾಗದೇ ಮುಷ್ಕರವನ್ನು ಹೂಡಿದ್ದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಮನವೊಲಿಸುವಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಯಶಸ್ವಿಯಾಗಿದ್ದು, ಬಂಗೇರ ಅವರು ನೀಡಿದ ಭರವಸೆಗೆ ಒಪ್ಪಿ ಕಾರ್ಮಿಕರು ಸೋಮವಾರ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.

ಪಟ್ಟಣ ಪಂಚಾಯತ್ ನಲ್ಲಿ ಹೊರ ಗುತ್ತಿಗೆಯಲ್ಲಿ 10 ಮಂದಿ ಕಾರ್ಮಿಕರು ಹಾಗೂ 2 ಮಂದಿ ಚಾಲಕರು ದುಡಿಯುತ್ತಿದ್ದಾರೆ. ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ, ನೌಕರಿಯನ್ನು ಖಾಯಂ ಮಾಡಬೇಕು, ಸರಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಬೇಕು ಹಾಗೂ ಈ ಸವಲತ್ತುಗಳು ಸರಿಯಾಗಿ ಸಿಗುವಂತಾಗಬೇಕು ಇತ್ಯಾದಿ ಬೇಡಿಕೆಯನ್ನು ಮುಂದಿರಿಸಿ, ಶುಕ್ರವಾರದಿಂದ ಕೆಲಸಕ್ಕೆ ಹಾಜರಾಗದೇ ಮುಷ್ಕರ ನಡೆಸುತ್ತಿದ್ದರು.

ಕಳೆದ ನಾಲ್ಕು ದಿನಗಳಿಂದ ನಗರ ಪ್ರದೇಶದಲ್ಲಿ ಪೌರ ಕಾರ್ಮಿಕರ ಮುಷ್ಕರದಿಂದ ಕಸ ವಿಲೇವಾರಿ ಆಗದೇ ಕಸದ ರಾಶಿ ತುಂಬಿ ತುಳುಕಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದ್ದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಮುಷ್ಕರರಿಂದ ಕಸ ಅಲ್ಲಲ್ಲಿ ಇದ್ದು ವಿಲೇವಾರಿ ಆಗದೇ ಗಬ್ಬು ವಾಸನೆ ಹುಟ್ಟಿಕೊಂಡಿತ್ತು. ಪಟ್ಟಣ ಪಂಚಾಯತ್ಗೆ ಶನಿವಾರ ಹಾಗೂ ರವಿವಾರ ರಜೆ ಇದ್ದುದರಿಂದ ಪರ್ಯಾಯ ವ್ಯವಸ್ಥೆ ಮಾಡಲು ಅಸಾಧ್ಯವಾಗಿತ್ತು.

ಸೋಮವಾರ ಪಟ್ಟಣ ಪಂಚಾಯತ್ ಎದುರು ಮಳೆಯನ್ನು ಲೆಕ್ಕಿಸದೆ ಮುಷ್ಕರ ನಿರತ ಕಾರ್ಮಿಕರನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಭೇಟಿ ನೀಡಿದರು. ಕಾರ್ಮಿಕರು ತಮ್ಮ ಮನವಿಯನ್ನು ಬಂಗೇರ ಅವರಿಗೆ ನೀಡಿ ತಮ್ಮ ಸಮಸ್ಯೆಯನ್ನು ವಿವರಿಸಿದರು. ಕಾರ್ಮಿಕರ ಸಮಸ್ಯೆಯನ್ನು ಆಲಿಸಿದ ಮಾಜಿ ಶಾಸಕ ಬಂಗೇರ ಅವರ ಬೇಡಿಕೆಯನ್ನು ತಿಳಿದುಕೊಂಡು ಪಟ್ಟಣ ಪಂಚಾಯತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಅವರ ಸಮಸ್ಯೆಯನ್ನು ಅಧಿಕಾರಿಗಳಿಗೆ ವಿವರಿಸಿದರು. ಪೌರ ಕಾರ್ಮಿಕರ ಹಾಗೂ ಅಧಿಕಾರಿಗಳ ನಡುವೆ ಇದ್ದ ಮಾಹಿತಿ ಕೊರತೆಯಿಂದ ಸಮಸ್ಯೆ ಹುಟ್ಟಿಕೊಂಡಿದೆ. ಅದನ್ನು ಮಾಜಿ ಶಾಸಕ ಬಂಗೇರ ಎರಡು ಕಡೆಗೂ ಮನವರಿಕೆ ಮಾಡಿಕೊಟ್ಟರು.

ಪೌರ ಕಾರ್ಮಿಕರ ಬೇಡಿಕೆ ಹಾಗೂ ಸಮಸ್ಯೆಯನ್ನು 15 ದಿನಗಳ ಒಳಗೆ ಬಗೆಹರಿಸಿ ಕೊಡಲಾಗುವುದಾಗಿ ಅಧಿಕಾರಿಗಳು ತಿಳಿಸಿದರು. ಒಂದು ವೇಳೆ ಪೌರ ಕಾರ್ಮಿಕರ ಸಮಸ್ಯೆಗಳು ಪೂರ್ಣವಾಗಿ ಬಗೆಹರಿಯದಿದ್ದರೆ ಸರಕಾರದ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೌರ ಕಾರ್ಮಿಕರಿಗೆ ಭರವಸೆ ನೀಡಿದರು.

ಮಾಜಿ ಶಾಸಕರ ಭರವಸೆಯನ್ನು ಸ್ವೀಕರಿಸಿದ ಪೌರ ಕಾರ್ಮಿಕರು ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡರು. ಸೋಮವಾರ ಸಂಜೆಯಿಂದಲೇ ನಗರ ಸ್ವಚ್ಛತೆಯನ್ನು ಮಾಡುವುದಾಗಿ ತಿಳಿಸಿದರು. ಅಲ್ಲದೆ  ಮಂಗಳವಾರ ನಗರ ಪ್ರದೇಶದಲ್ಲಿ ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಯ ವಿಲೇವಾರಿಯನ್ನು ಮಾಡಿಕೊಡುವುದಾಗಿ ಪೌರ ಕಾರ್ಮಿಕರು ತಿಳಿಸಿದರು.

ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಿಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಗದೀಶ ಡಿ ಮಾಹಿತಿ ನೀಡಿದರು. ಅಧಿಕಾರಿಗಳಾದ ವೆಂಕಟರಮಣ ಶರ್ಮ, ಇಂಜಿನಿಯರ್ ಮಹಾವೀರ ಅರಿಗ ಅವರು ಮಾತುಕತೆಯಲ್ಲಿ ಭಾಗವಹಿಸಿದ್ದರು. ಜಿ.ಪಂ. ಸದಸ್ಯ ಸಾಹುಲ್ ಹಮೀದ್, ದಲಿತ ಮುಖಂಡರಾದ ಚಂದ್ ಎಲ್., ಬಿ.ಕೆ. ವಸಂತ, ವೆಂಕಣ್ಣ ಕೊಯ್ಯೂರು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News