ಜೀವನ ಯಶೋಗಾಥೆ ತೆರೆದಿಟ್ಟು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಉಡುಪಿ ಎಸ್ಪಿ

Update: 2018-07-16 14:52 GMT

ಉಡುಪಿ, ಜು.16: ಬಿಜಾಪುರದ ಹಳ್ಳಿಯೊಂದರ ಸರಕಾರಿ ಶಾಲೆಯಲ್ಲಿ ಕಲಿತು ಮಾತೃಭಾಷೆ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ತನ್ನ ಜೀವನದಲ್ಲಿ ಎದುರಿಸಿದ ಸವಾಲುಗಳ ಯಶೋಗಾಥೆಯನ್ನು ಮನ ಬಿಚ್ಚಿ ಹೇಳುವ ಮೂಲಕ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಉಡುಪಿ ರೋಟರಿ ವತಿಯಿಂದ ನಿಟ್ಟೂರು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ರಸ್ತೆ ಸುರಕ್ಷತೆ ಮತ್ತು ರಸ್ತೆ ಸಂಚಾರ ಜಾಗೃತಿ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಮಕ್ಕಳಿಗೆ ಜೀನದ ಪಾಠ ವನ್ನು ಹೇಳಿಕೊಟ್ಟರು.

‘ಬಿಜಾಪುರ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿ, ಸವದತ್ತಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದ ನಾನು, ಕನ್ನಡ ಮಾಧ್ಯಮದಲ್ಲಿ ಕಲಿತ ಪರಿಣಾಮವನ್ನು ಪಿಯುಸಿಯಲ್ಲಿ ಎದುರಿಸಿದೆ. ಹುಬ್ಬಳ್ಳಿಯಲ್ಲಿ ಪಿಯುಸಿ ಕಲಿಯುವಾಗ ಭಾಷೆ ಸಮಸ್ಯೆ ಎದುರಾದರೂ ನನ್ನಲ್ಲಿ ಮೂಡಿದ ಕೀಳರಿಮೆ ಯನ್ನು ಸಮರ್ಥವಾಗಿ ಎದುರಿಸಿದೆ. ಮೊದಲ ಆರು ತಿಂಗಳ ಸೆಮಿಸ್ಟರ್‌ನಲ್ಲಿ ಶೂನ್ಯ ಅಂಕ ಪಡೆದೆ. ಅದನ್ನು ಸವಾಲಾಗಿ ಸ್ವೀಕರಿಸಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿದೆ’

‘ಪ್ರಥಮ ಪಿಯುಸಿಯ ಫಲಿತಾಂಶ ದಿನ ನಾನು ಹೋಗಿ ನೋಟೀಸ್ ಬೋರ್ಡ್‌ನಲ್ಲಿ ನನ್ನ ಹೆಸರು ಹುಡುಕಿದೆ. ಎಲ್ಲೂ ನನ್ನ ಹೆಸರು ಇರಲಿಲ್ಲ. ಅಷ್ಟರಲ್ಲಿ ಸಹಪಾಠಿಗಳು ಬಂದು ಟಾಪ್ 10ರಲ್ಲಿ ನಿನ್ನ ಹೆಸರನ್ನು ಪ್ರತ್ಯೇಕ ನೋಟೀಸ್ ಬೋರ್ಡ್‌ನಲ್ಲಿ ಹಾಕಿರುವುದಾಗಿ ಬಂದು ತಿಳಿಸಿದರು. ದ್ವಿತೀಯ ಪಿಯುಸಿಯಲ್ಲಿ ಶಾಲೆಗೆ ಪ್ರಥಮ ಬಂದ ನನ್ನ ಫೋಟೋ ಪತ್ರಿಕೆಯಲ್ಲಿ ಪ್ರಕಟಗೊಂಡಿತು’

‘ಹುಬ್ಬಳ್ಳಿಯಲ್ಲಿ ಇಂಜಿನಿಯರ್ ಶಿಕ್ಷಣ ಪಡೆದು ಶೇ.85 ಅಂಕಗಳಿಸಿದೆ. ನಂತರ ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಆಗ ಪ್ರೊಫೆಸರ್ ಒಬ್ಬರು ಜೀವನ ಹಾಳು ಮಾಡಿಕೊಳ್ಳಬೇಡ, ವಿದೇಶಕ್ಕೆ ಹೋಗಿ ಭವಿಷ್ಯ ಕಟ್ಟಿಕೊಳ್ಳು ಎಂದು ಸಲಹೆ ನೀಡಿದರು. ಆದರೆ ನಾಲ್ಕು ಜನರಿಗೆ ಸಹಾಯ ಮಾಡಲು ಐಪಿಎಸ್, ಐಎಎಸ್‌ನಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ನಾನು ಯುಪಿಎಸ್‌ಪಿ ಪರೀಕ್ಷೆ ತರಬೇತಿಗಾಗಿ ದೆಹಲಿಗೆ ತೆರಳಿದೆ’

ಯುಪಿಎಸ್‌ಸಿ ಪರೀಕ್ಷೆಯ ಮೊದಲ ಹಾಗೂ ಎರಡನೆ ಪ್ರಯತ್ನದಲ್ಲಿ ಅನುತ್ತೀರ್ಣನಾದೆ. ಹೀಗೆ ಮೂರು ವರ್ಷ ಇದರಲ್ಲೇ ಕಳೆದೆ. ಇದರಿಂದ ಸ್ನೇಹಿತರು ಹಾಗೂ ಕುಟುಂಬದವರು ನನ್ನನ್ನು ದೂರ ಮಾಡಿದರು. ಹೀಗೆ ಯೋಚಿಸುತ್ತಿರುವಾಗ ನನ್ನ ಕೈಹಿಡಿದದ್ದು ನನ್ನ ಮಾತೃಭಾಷೆ ಕನ್ನಡ. ಮೂರನೆ ಪ್ರಯತ್ನವನ್ನು ಯಾರ ಪ್ರೋತ್ಸಾಹ ಇಲ್ಲದೆ ಒಬ್ಬಂಟಿಯಾಗಿ ಕನ್ನಡದಲ್ಲಿ ಬರೆಯಲು ನಿರ್ಧರಿಸಿದೆ. 2014ರ ಬ್ಯಾಚ್‌ನಲ್ಲಿ 104ನೆ ರ್ಯಾಂಕ್ ಪಡೆದು ಕರ್ನಾಟಕದಲ್ಲಿ ಐಪಿಎಸ್ ಆಗಿ ಸೇವೆ ಆರಂಭಿಸಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತನ್ನ ಜೀವನ ಸಾಧನೆಯನ್ನು ಮಕ್ಕಳ ಮುಂದೆ ತೆರೆದಿಟ್ಟರು.

‘ನಾನು ಕೂಡ ನಿಮ್ಮಲ್ಲಿ ಒಬ್ಬನಾಗಿದ್ದೆ’
‘30 ವರ್ಷಗಳ ಹಿಂದೆ ನಾನು ಕೂಡ ನಿಮ್ಮಲ್ಲಿ ಒಬ್ಬನಾಗಿದ್ದೆ. ಮನೆಯಿಂದ ನಾಲ್ಕು ಕಿ.ಮೀ. ದೂರ ನಡೆದುಕೊಂಡೆ ಹೋಗಿ ಕನ್ನಡ ಶಾಲೆಯಲ್ಲಿ ಕಲಿತಿದ್ದೇನೆ. ಕನ್ನಡ ಭಾಷೆಯು ನಮಗೆ ಬದುಕನ್ನು ಕಲಿಸುತ್ತದೆ. ಕನ್ನಡ ಮಾಧ್ಯಮದ ಮಕ್ಕಳು ಪ್ರತಿಯೊಂದನ್ನು ಅನುಭವಿಸಿ ಅರ್ಥ ಮಾಡಿಕೊಂಡು ಕಲಿಯುತ್ತಾರೆ. ಅಸಾಧ್ಯವಾದುದು ಏನು ಇಲ್ಲ ಎಂಬುದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದರು.

ಜೀವನದಲ್ಲಿ ಏನಾಗಬೇಕೆಂಬ ಗುರಿಯನ್ನು ಸಾಧಿಸುವುದು ಮಾತ್ರವಲ್ಲ, ಅದಕ್ಕೆ ನ್ಯಾಯ ಕೊಡುವುದು ಅತಿ ಮುಖ್ಯ. ಅವಕಾಶ ಸಿಗದಿರುವುದು ನಮ್ಮ ತಪ್ಪಲ್ಲ. ಆದರೆ ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿರುವುದು ನಮ್ಮ ತಪ್ಪು ಆಗುತ್ತದೆ’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News