×
Ad

ಮಂಗಳೂರು ವಿವಿ ಮಟ್ಟದ ಸಂಸ್ಕೃತ ಪಠ್ಯಪುಸ್ತಕ ಕಾರ್ಯಾಗಾರ

Update: 2018-07-16 20:12 IST

 ಉಡುಪಿ, ಜು.16: ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳಿಗೂ ತಾಯಿಯ ಸ್ಥಾನದಲ್ಲಿದೆ. ಸಂಸ್ಕೃತ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಇದಕ್ಕೆ ಪೂರಕವಾದ ಪಠ್ಯರಚನೆಯನ್ನು ವಿಶ್ವವಿದ್ಯಾನಿಲಯ ಮಾಡಬೇಕು. ಉತ್ತಮ ಪಠ್ಯದಿಂದ ವಿದ್ಯಾರ್ಥಿಗಳ ಸಂಸ್ಕಾರ ಹೆಚ್ಚುತ್ತದೆ ಎಂದು ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಕೃತ ಶಿಕ್ಷಕ ಸಂಘ ಹಾಗೂ ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಕಾಲೇಜಿನ ಮಿನಿ ಹಾಲ್‌ನಲ್ಲಿ ಆಯೋಜಿಸಲಾದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಂಸ್ಕೃತ ಪಠ್ಯ ಪುಸ್ತಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಡಾ. ಸತ್ಯನಾರಾಯಣ ಆಚಾರ್ಯ ಮಾತನಾಡಿ, ಸಂಸ್ಕೃತದಲ್ಲಿ ಅದ್ಬುತವಾದ ಶಾಸ್ತ್ರ ಗಳಿವೆ. ಅವುಗಳು ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳಕಿಗೆ ಬಂದಿಲ್ಲ. ಅಂಥ ವಿಷಯಗಳನ್ನು ಪಠ್ಯದಲ್ಲಿ ಸೇರಿಸುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಪ್ರಜ್ಞಾ’ವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಡಾಕ್ಟರೇಟ್ ಪದವಿ ಪಡೆದ ಗಾಳಿಮನೆ ವಿನಾಯಕ ಭಟ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ಕಾರ್ಯದರ್ಶಿ ಡಾ.ಜಿ. ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಟಿ.ಎಸ್. ಸ್ವಾಗತಿಸಿ ದರು. ಸಂಸ್ಕೃತ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ.ಮಂಜುನಾಥ ಭಟ್ ವಂದಿಸಿದರು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News