ಹೂಡೆ ಸಾಲಿಹಾತ್‌ನಲ್ಲಿ ಈದ್ ಸೌಹಾರ್ದ ಕೂಟ
ಉಡುಪಿ, ಜು.16: ತೋನ್ಸೆ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಜಂಟಿ ಆಶ್ರಯ ದಲ್ಲಿ ಈದ್ ಸೌಹಾರ್ದ ಕೂಟವು ಇತ್ತೀಚೆಗೆ ಸಾಲಿಹಾತ್ ಸಭಾಂಗಣದಲ್ಲಿ ಜರಗಿತು.
ಉಡುಪಿ ತಾಪಂ ಮಾಜಿ ಸದಸ್ಯೆ ವೆರೋನಿಕ ಕರ್ನೇಲಿಯೊ ಮಾತನಾಡಿ, ಧರ್ಮವು ಯಾರನ್ನು ಪ್ರತ್ಯೇಕಿಸುವುದಿಲ್ಲ. ಧರ್ಮಾಂಧತೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಅಧಿಕಾರಕ್ಕಾಗಿ ಧರ್ಮದ ದುರ್ಬಳಕೆಯು ಮುಂದಿನ ಯುವ ಪೀಳಿಗೆಗೆ ಕೆಟ್ಟ ಸಂದೇಶ ನೀಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಾಮಾಜಿಕ ಕರ್ಯಕರ್ತೆ ರೇಶ್ಮಾ ಬೈಲೂರ್ ಮಾತನಾಡಿ, ಕರಾವಳಿ ಪ್ರದೇಶದ ಜನರು ಭಾಗ್ಯವಂತರು. ಇಲ್ಲಿನ ಸಂಸ್ಕೃತಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆಕಿದೆ. ನಾವೆಲ್ಲರೂ ಯಾವುದೇ ಧರ್ಮವನ್ನು ಅನುಸರಿಸಿದರೂ ನಮ್ಮಲ್ಲಿ ಮಾನವೀಯ ಮೌಲ್ಯಗಳು ಎಂದೂ ಕೂಡ ನಮ್ಮಿಂದ ದೂರವಾಗ ಬಾರದೆಂದರು.
ಪೌಢ ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಶುಭಹಾರೈಸಿದರು. ಈ ಸಂದರ್ಭ ದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸುರಯ್ಯಾ ಮುನೀರ್ ಕಿರಾತ್ ಪಠಿಸಿದರು. ಶಿಕ್ಷಕಿ ತಸ್ಲೀಮ್ ಆದಮ್ ಸ್ವಾಗತಿಸಿದರು. ಶಿಕ್ಷಕಿ ಅಲ್ಫಿಯಾ ವಂದಿಸಿದರು. ಜಮೀಲಾ ಇಸಾಕ್ ಕಾರ್ಯಕ್ರಮ ನಿರೂಪಿಸಿದರು.