×
Ad

​40 ಕಿ.ಮೀ. ರಸ್ತೆ ಮಾಡಿಸಲಾಗದ ಸಂಸದರು ನಮಗೆ ಯಾಕೆ ಬೇಕು: ಐವನ್ ಡಿಸೋಜ ಪ್ರಶ್ನೆ

Update: 2018-07-16 20:43 IST

ಮಂಗಳೂರು, ಜು.16: ರಾಷ್ಟ್ರೀಯ ಹೆದ್ದಾರಿ 66 ಅವೈಜ್ಞಾನಿಕ, ಅಪೂರ್ಣ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ 45 ಕಿ.ಮೀ. ರಸ್ತೆ ಮಾಡಲಾಗದ ಸಂಸದರು ಯಾಕೆ ಇರಬೇಕು ಮತ್ತು ಕಾಮಗಾರಿ ಸಂಪೂರ್ಣವಾಗಲು ಇನ್ನೆಷ್ಟು ವರ್ಷ ಬೇಕು? ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ಸೋಮವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪಂಪ್‌ವೆಲ್, ನಂತೂರು, ಕೊಟ್ಟಾರಚೌಕಿ, ಮುಲ್ಕಿಯಲ್ಲಿ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ವಾಗಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ನೀರು ಹೆದ್ದಾರಿ ಮೇಲೆ ಹರಿಯುತ್ತಿದೆ. ಉತ್ತಮ ತಂತ್ರಜ್ಞಾನದಿಂದ ಹೆದ್ದಾರಿ ಕಾಮಗಾರಿ ನಡೆಸುವುದಾಗಿ ಹೇಳುವ ಸಂಸದರು ಇದಕ್ಕೇನು ಹೇಳುತ್ತಾರೆ ? ಹೆದ್ದಾರಿ ಕೆಲಸ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಕೂಡ ಮಾಡುತ್ತಿದೆ. ಅದನ್ನು ತಡೆಯಲಾಗದೆ ಸಂಸದರು ಅಸಹಾಯಕತೆ ವ್ಯಕ್ತಪಡಿಸುವುದು ಎಷ್ಟು ಸರಿ ಎಂದರು.

ಸಂಸದ ನಳಿನ್ ಕುಮಾರ್ ದ.ಕ. ಜಿಲ್ಲೆಯ ಸಂಸದರಾಗಿ 10 ವರ್ಷಗಳಾಯಿತು. ಅದಕ್ಕಿಂತ ಹಿಂದೆ ಡಿ.ವಿ. ಸದಾನಂದ ಗೌಡ ಸಂಸದರಾಗಿದ್ದರು. ಈ ಅವಧಿಯಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಬಿಟ್ಟರೆ ಇವರಿಬ್ಬರೂ ಏನೂ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದರೂ ನಿರ್ವಹಣೆ ಕೂಡಾ ಮಾಡಿಲ್ಲ. ಪಡುಬಿದ್ರೆ ಸಹಿತ ಎರಡೂ ಜಿಲ್ಲೆಗಳ ಮೇಲ್ಸೇತುವೆಗಳು ಪೂರ್ತಿಯಾಗದೆ ಸಮಸ್ಯೆಯಾಗಿದೆ. ಉಭಯ ಜಿಲ್ಲೆಗಳ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಮೌನ ತಾಳಿರುವುದರ ಹಿಂದಿನ ಮರ್ಮ ಏನು ? ಎಂದು ಐವನ್ ಪ್ರಶ್ನಿಸಿದರಲ್ಲದೆ, ಹೆದ್ದಾರಿ ಕಾಮಗಾರಿ ಪೂರ್ತಿಯಾಗದಿದ್ದರೆ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಎನ್‌ಎಚ್‌ಎಐ ಕಚೇರಿ ಸ್ಥಳಾಂತರಿಸಿ: ಕೆಪಿಟಿ ಬಳಿ ಓವರ್ ಅಥವಾ ಅಂಡರ್‌ಪಾಸ್ ಆಗಿಲ್ಲ. ನಂತೂರು ಸರ್ಕಲ್ ಸಮಸ್ಯೆ ಬಗೆಹರಿದಿಲ್ಲ. ಪ್ರಶ್ನಿಸಿದರೆ ಸಮರ್ಪಕ ಉತ್ತರವಿಲ್ಲ. ಡಿಪಿಆರ್ ಆಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದಾರೆಯೇ ವಿನಾ ಏನೂ ಮಾಡುತ್ತಿಲ್ಲ. ಕೆಡಿಪಿ ಪ್ರಗತಿ ಪರಿಶೀಲನೆ ಸಭೆಗೂ ಈ ಅಧಿಕಾರಿಗಳು ಬರುತ್ತಿಲ್ಲ. ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್ ಶಿವಮೊಗ್ಗದಲ್ಲಿ ಕಚೇರಿ ಇಟ್ಕೊಂಡು ಕೂತಿರುವುದು ಸರಿಯಲ್ಲ. ತಕ್ಷಣ ಅವರು ತನ್ನ ಕಚೇರಿಯನ್ನು ಮಂಗಳೂರು ಅಥವಾ ಮೂಡುಬಿದಿರೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ವಿಶೇಷ ನ್ಯಾಯಾಲಯ ಸ್ಥಾಪಿಸಿ: ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಅಡಿಯಲ್ಲಿ 2,484 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಇತ್ಯರ್ಥವಾದ 182 ಪ್ರಕರಣಗಳಲ್ಲಿ 142ರಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಅಂದರೆ ಶಿಕ್ಷೆಯ ಪ್ರಮಾಣ ಶೇ.90ಕ್ಕೂ ಹೆಚ್ಚಾಗಿದೆ. ಅಲ್ಲದೆ ರಾಜ್ಯದ 30 ನ್ಯಾಯಾಲಯಗಳಲ್ಲಿ ಈ ಬಗ್ಗೆ ವಿಚಾರಣೆಯನ್ನೂ ನಡೆಸಲಾಗುತ್ತಿದೆ. ಸಮಾಜಕ್ಕೆ ಕಂಠಕವಾಗಿರುವ ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.

ಗೂಡಂಗಡಿ ಪರಿಶೀಲಿಸಿ: ರಾಜ್ಯಾದ್ಯಂತದ ಶಾಲೆ, ಕಾಲೇಜುಗಳ ಸಮೀಪದ ಗೂಡಂಗಡಿಗಳಲ್ಲಿ ಮಾದಕ ದ್ರವ್ಯ ಮಾರಾಟ ನಡೆಯುತ್ತಿರುವುದನ್ನು ತಡೆಗಟ್ಟಲು ಗೃಹ ಸಚಿವರು ಎಲ್ಲ ಠಾಣಾ ವ್ಯಾಪ್ತಿಯ ಗೂಡಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಬೇಕು. ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ವೈನ್‌ಶಾಪ್‌ಗಳು ಬೆಳಗ್ಗೆ 6ರಿಂದ 8ರೊಳಗೆ ತೆರೆಯುತ್ತಿವೆ. ಇಂತಹ ಅಂಗಡಿಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಎಸ್ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರಿಸಿ: ದ.ಕ.ಜಿಲ್ಲೆಯಲ್ಲಿ 19 ನೋಂದಾಯಿತ ಸ್ಕಿಲ್ ಗೇಮ್ ಮತ್ತು ಜುಗಾರಿ ಕ್ಲಬ್‌ಗಳಿವೆ. ಆದರೆ ಪರವಾನಗಿ ಇಲ್ಲದ ಯಾವುದೇ ಸ್ಕಿಲ್ ಗೇಮ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನನ್ನ ಪ್ರಶ್ನೆಗೆ ಸದನದಲ್ಲಿ ಸರಕಾರ ಉತ್ತರ ನೀಡಿದೆ. ಇಂಥ ಅಕ್ರಮ ಕೇಂದ್ರಗಳ ಪತ್ತೆಗೆ ಮಂಗಳೂರಿನಲ್ಲಿ ವಿಶೇಷ ಠಾಣೆ ತೆರೆಯಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರಲ್ಲದೆ, ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಸರಕಾರ ಕ್ರಮ ಜರುಗಿಸಬೇಕು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News