×
Ad

ಮೂಡುಬಿದಿರೆ: ಗಾಳಿಮಳೆಗೆ ತಾತ್ಕಾಲಿಕ ಮಾರುಕಟ್ಟೆಗೆ ಹಾನಿ

Update: 2018-07-16 21:32 IST

ಮೂಡುಬಿದಿರೆ, ಜು.16: ರವಿವಾರ ರಾತ್ರಿ ಸುರಿದ ಗಾಳಿಮಳೆಯಿಂದಾಗಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಾರುಕಟ್ಟೆಯ 13 ಅಂಗಡಿಗಳು ಹಾನಿಗೊಳಗಾಗಿವೆ. ಇದರಿಂದ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮೂಡುಬಿದಿರೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗುವ ಹಿನ್ನಲೆಯಲ್ಲಿ, ವ್ಯಾಪಾರಿಗಳಿಗೆ ಎರಡು ವರ್ಷದ ಮಟ್ಟಿಗೆ ತಾತ್ಕಾಲಿಕ ಮಾರುಕಟ್ಟೆಯನ್ನು ವ್ಯವಸ್ಥೆಯನ್ನು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕಲ್ಪಿಸಲಾಗಿದೆ. ಆದರೆ ರವಿವಾರ ಸುರಿದ ಗಾಳಿ ಮಳೆಗೆ ಮಾರುಕಟ್ಟೆಯ ಪಶ್ಚಿಮ ಭಾಗದ 13 ಅಂಗಡಿಗಳು ಹಾನಿಗೊಳಗಾಗಿವೆ. ಫೂಟ್ ವೇರ್, ದಿನಸಿ ಅಂಗಡಿ, ಸೆಲೂನ್, ವಾಚ್ ರಿಪೇರಿ ಅಂಗಡಿ ಸಹಿತ ಅಂಗಡಿಗಳಿದ್ದ ವಸ್ತುಗಳು ಮಳೆಗೆ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗಾಳಿ ರಭಸಕ್ಕೆ ಮೇಲ್ಛಾವಣಿಯ ಜೊತೆಗೆ ಅಂಗಡಿ ಶಟರ್ ಕೂಡ ಕಿತ್ತು ಬಂದಿದೆ. ಮಾರುಕಟ್ಟೆಯ ಇತರ ಅಂಗಡಿಗಳು ಕೂಡ ಮಳೆಯಿಂದ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಸೋಮವಾರ ದುರಸ್ತಿ ಕೆಲಸವನ್ನು ಪ್ರಾರಂಭಿಸಲಾಗಿದೆ.

ಪರಿಹಾರಕ್ಕೆ ಶಾಸಕರ ಸೂಚನೆ:

ಹಾನಿಗೊಳಗಾದ ಅಂಗಡಿಗಳನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಬೆಳಗ್ಗೆ ಪರಿಶೀಲಿಸಿದರು. ಆ ಬಳಿಕ ಪ್ರವಾಸಿ ಬಂಗಲೆಯಲ್ಲಿ ಅಂಗಡಿ ಸಂತ್ರಸ್ತರು, ಪುರಸಭಾ ಅಧಿಕಾರಿ, ಸದಸ್ಯರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸಿ ಎಂದು ಸೂಚಿಸಿದರು. ಕಂದಾಯ ಇಲಾಖೆಯಿಂದಲೂ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಲಕ್ಷಣ ಪೂಜಾರಿ, ನಾಗರಾಜ ಪೂಜಾರಿ, ಪ್ರಸಾದ್, ಹನೀಫ್ ಅಲಂಗಾರ್, ಪುರಸಭಾ ಇಂಜಿನಿಯರ್ ದಿನೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News