×
Ad

ಪಟ್ಟದ ದೇವರಿಗಾಗಿ ಮಠದ ವಿರುದ್ಧ ಕ್ರಿಮಿನಲ್ ಕೇಸ್: ಶಿರೂರು ಸ್ವಾಮೀಜಿ

Update: 2018-07-16 21:54 IST

ಶಿರೂರು (ಹಿರಿಯಡ್ಕ), ಜು.16: ಶ್ರೀಕೃಷ್ಣ ಮಠದ ಶ್ರೀಕೃಷ್ಣ ನನ್ನ ಸೊತ್ತಲ್ಲ, ಶ್ರೀರಾಮ ನನ್ನ ಸೊತ್ತಲ್ಲ. ಆದರೆ ಅನ್ನ ವಿಠಲ ನನ್ನ ಸೊತ್ತು. ನನ್ನ ಪಟ್ಟದ ದೇವರನ್ನು ಹಿಂದಕ್ಕೆ ಪಡೆಯಲು ಅಗತ್ಯ ಬಿದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ನಾನು ಹಿಂಜರಿಯಲಾರೆ ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ಶಿರೂರು ಮೂಲ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ವಿವಾದವಾಗಿ ಬೆಳೆದಿರುವ ಶಿರೂರು ಮಠದ ಪಟ್ಟದ ದೇವರಾದ ವಿಠಲ ಸೇರಿದಂತೆ ಇತರ ಮೂರ್ತಿಗಳನ್ನು ಅವರಿಗೆ ಹಿಂದಕ್ಕೆ ನೀಡಲು ನಿರಾಕರಿಸಿರುವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಅಲ್ಲದೇ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಸೇರಿದಂತೆ ಅಷ್ಟಮಠಗಳ ಎಂಟು ಸ್ವಾಮೀಜಿಗಳ ನಿರ್ಧಾರದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಸೂಚನೆ ನೀಡಿದರು.

‘ನೀವು ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ನಿಮ್ಮಲ್ಲಿರುವ ಬೆಲೆಬಾಳುವ ವಸ್ತು ಹಾಗೂ ಆಭರಣಗಳನ್ನು ನಿಮ್ಮ ನಂಬಿಗಸ್ಥರಿಗೆ ನೀಡಿ, ಮರಳಿದ ಬಳಿಕ ಅವುಗಳನ್ನು ವಾಪಾಸು ಪಡೆಯುವುದು ಸಾಮಾನ್ಯ. ಒಂದು ವೇಳೆ ನಿಮ್ಮ ಸೊತ್ತುಗಳನ್ನು ಹಿಂದಿರುಗಿಸಲು ನಿರಾಕರಿಸಿದ ಅದು ದೊಡ್ಡ ದರೋಡೆಯಂತೆ. ಹಾಗೆಯೇ ಶ್ರೀಕೃಷ್ಣ ಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಹಿಂದಿರುಗಿಸಲು ನಿರಾಕರಿಸುತ್ತಿರುವುದು ಸಹ ದರೋಡೆಗೆ ಸಮಾನ’ ಎಂದು ಶಿರೂರು ಶ್ರೀ ನುಡಿದರು.

ಅಷ್ಟ ಮಠಗಳಲ್ಲಿ ಆರು ಮಠಗಳ ಸ್ವಾಮೀಜಿ ಒಂದಾಗಿ ಸಭೆ ನಡೆಸಿದ್ದಾರೆ. ಅವರೆಲ್ಲ ಸೇರಿ ನನ್ನ ವಿರುದ್ಧ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ಪಟ್ಟದ ದೇವರನ್ನು ಕೇಳಿದರೆ, ನಮ್ಮ ನಾಯಕನನ್ನು ಕೇಳಿ ಎನ್ನುತ್ತಾರೆ ಎಂದು ಶಿರೂರು ಶ್ರೀ ಹೇಳಿದರು. ಯಾರು ಈ ನಾಯಕ ಎಂದು ಕೇಳಿದರೆ, ಅವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಪೇಜಾವರಶ್ರೀಗಳ ವಿರುದ್ಧ ಪರೋಕ್ಷವಾಗಿ ಬೊಟ್ಟು ಮಾಡಿದರು.

‘ನೀವು ಶಿಷ್ಯನನ್ನು ಸ್ವೀಕರಿಸಿದರೆ ಮಾತ್ರ ಪಟ್ಟದ ದೇವರನ್ನು ಮರಳಿಸಲು ಉಳಿದ ಸ್ವಾಮೀಜಿಗಳು ನಿರ್ಧರಿಸಿದ್ದಾರಲ್ಲ’ ಎಂದು ಪ್ರಶ್ನಿಸಿದಾಗ, ಕೆರಳಿದ ಶಿರೂರು ಶ್ರೀ ‘ಶಿಷ್ಯನನ್ನು ಸ್ವೀಕರಿಸದ ಹೊರತು ಪಟ್ಟದ ದೇವರನ್ನು ನೀಡುವುದಿಲ್ಲ ಎಂದು ಹೇಳಲು ಅವರು ಯಾರು. ಅದನ್ನು ನಿರ್ಧರಿಸಬೇಕಾದವನು ನಾನು. ಅಷ್ಟಕ್ಕೂ ಅಲ್ಲಿ ಶಿಷ್ಯನನ್ನು ಸ್ವೀಕರಿಸಲು ಎಷ್ಟೊಂದು ಮಂದಿ ಇದ್ದಾರೆ. ನನ್ನ ಶಿಷ್ಯನನ್ನು ಸ್ವೀಕರಿಸಲು ನನಗೆ ಗೊತ್ತಿದೆ’ ಎಂದರು.

‘ಇನ್ನು ಮುಂದೆ ಉಳಿದ ಸ್ವಾಮೀಜಿಗಳು ಈ ಬಗ್ಗೆ ಸಭೆ ನಡೆಸಿ ಕರೆದರೂ ನಾನು ಹೋಗುವುದಿಲ್ಲ. ಇಲ್ಲಿನ ಮುಖ್ಯ ಪ್ರಾಣನೇ ನನ್ನ ಪಟ್ಟದ ದೇವರನ್ನು ಪುನ: ಮೂಲ ಮಠಕ್ಕೆ ಕರೆಸಿಕೊಳ್ಳುತ್ತಾನೆ’ ಎಂದು ಅವರು ಸವಾಲು ಹಾಕಿದರು.

ಸಂಪ್ರದಾಯಗಳ ಕುರಿತು ಮಾತನಾಡುವ ಇವರು ಎಷ್ಟು ಸಂಪ್ರದಾಯಗಳನ್ನು ಪಾಲಿಸುತ್ತಾರೆ ಎಂದು ಪ್ರಶ್ನಿಸಿದ ಶಿರೂರು ಶ್ರೀ, ಸಂಪ್ರದಾಯದಂತೆ ಪ್ರತಿ ಮಠದ ಪಟ್ಟದ ದೇವರನ್ನು ಮುಟ್ಟುವ, ಪೂಜಿಸುವ ಹಾಗೂ ಅದಿರುವ ಪೆಟ್ಟಿಗೆಯನ್ನು ಮುಚ್ಚುವ ಮತ್ತು ತೆರೆಯುವ ಅಧಿಕಾರವಿರುವುದು ಆಯಾ ಸ್ವಾಮೀಜಿಗಳಿಗೆ ಮಾತ್ರ. ಆದರೆ ಇಲ್ಲಿನ ಕೆಲವು ಸ್ವಾಮೀಜಿಗಳು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಈ ಪೆಟ್ಟಿಗೆಯನ್ನು ತೆರೆದು ಮೂರ್ತಿಯನ್ನು ಮುಟ್ಟುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News