ಶಿರೂರು: 15 ಎಕರೆ ಪ್ರದೇಶದಲ್ಲಿ ಕಾಡು ಬೆಳೆಸಲು ಚಾಲನೆ
ಶಿರೂರು (ಹಿರಿಯಡ್ಕ), ಜು.16: ಇಲ್ಲಿರುವ ಶಿರೂರು ಮೂಲಮಠಕ್ಕೆ ಸೇರಿದ 15 ಎಕರೆ ಪ್ರದೇಶದಲ್ಲಿ ಸ್ವಾಭಾವಿಕವಾದ ಕಾಡೊಂದನ್ನು ಬೆಳೆಸುವ ಪ್ರಕ್ರಿಯೆಗೆ ಇಂದು ಶಿರೂರು ಮಠಾಧೀಶರಾದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಶಿರೂರಿನಲ್ಲಿರುವ ಮಠಕ್ಕೆ ಸೇರಿದ ಜಾಗದಲ್ಲಿ 15 ಎಕರೆ ಪ್ರದೇಶವನ್ನು ಉಡುಪಿಯ ಸಂವೇದನಾ ಫೌಂಡೇಷನ್‌ಗೆ ಬಿಟ್ಟುಕೊಟ್ಟಿರುವ ಸ್ವಾಮೀಜಿ, ಇಲ್ಲಿ ಕಾಡೊಂದನ್ನು ಬೆಳೆಸುವ ಹಾಗೂ ಅದನ್ನು ನಿರ್ವಹಿಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರೆ. ಇದಕ್ಕಾಗಿ ಮಠದ 15 ಎಕರೆ ಜಾಗವನ್ನು ಫೌಂಡೇಷನ್ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ.
ಮಠಕ್ಕೆ ಸೇರಿದ ಜಾಗದಲ್ಲಿ ಮುಂದೆ ಕಾಲೇಜು, ರಾಷ್ಟ್ರೀಯ ಮಟ್ಟದ ಸಂಗೀತ ಶಾಲೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತಲೆ ಎತ್ತಲಿದ್ದು, ಇಲ್ಲಿ ಹಣ್ಣು ಹಂಪಲುಗಳನ್ನು ಬಿಡುವ ಮರಗಳನ್ನೊಳಗೊಂಡ ಕಾಡೊಂದನ್ನು ನಿರ್ಮಿಸಿ ಮತ್ತೆ ಪ್ರಾಣಿ, ಪಕ್ಷಿಗಳಿಗೆ ಸ್ವಚ್ಛಂದವಾಗಿ ಬದುಕಲು ಅವಕಾಶ ಮಾಡಿ ಕೊಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ 15 ಎಕರೆಯನ್ನು ಕಾಡು ಬೆಳೆಸಲು ನೀಡಿದ್ದೇವೆ ಎಂದರು.
ಸಂವೇದನಾ ಫೌಂಡೇಷನ್‌ನ ಅಧ್ಯಕ್ಷ ಪ್ರಕಾಶ್ ಮಲ್ಪೆ ಅವರು ಯೋಜನೆಯ ಬಗ್ಗೆ ವಿವರಿಸಿ ನಮ್ಮ ಫೌಂಡೇಷನ್ ನಾಡಿನಾದ್ಯಂತ ಸುಮಾರು 100 ಕಾಡುಗಳನ್ನು ನಿರ್ಮಿಸಿ ನಿರ್ವಹಿಸುವ ಯೋಜನೆ ಹಾಕಿಕೊಂಡಿದೆ. ನಾವು ಪಡೆದ ಜಾಗದಲ್ಲಿ ಕಾಡನ್ನು ಬೆಳೆಸಿ ಅದನ್ನು ನಿರ್ವಹಿಸುತ್ತೇವೆ. ಶಿರೂರು ಶ್ರೀಗಳಂತೆ ಕೇರಳ ಅನಂತಪದ್ಮನಾಭ ದೇವಾಲಯ ಟ್ರಸ್ಟ್ ನಮಗೆ ಮಡಿಕೇರಿಯಲ್ಲಿ 20 ಎಕರೆ ಜಾಗವನ್ನು ನೀಡಿ ಕಾಡು ಬೆಳೆಸಲು ಕೇಳಿಕೊಂಡಿದೆ ಎಂದರು.
ಶಿರೂರಿನಲ್ಲಿ ನಾವು ಪಡೆದ 15 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಮರಗಳನ್ನು ನೆಟ್ಟು ಬೆಳಸಲಿದ್ದೇವೆ. ಮುಂದಿನ ಒಂದು ವಾರ ಕಾಲ ಉಡುಪಿ ಆಸುಪಾಸಿನ ಐದು ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಪ್ರತಿದಿನ ಇಲ್ಲಿಗೆ ಬಂದು ಹೊಂಡ ತೋಡಿ ಗಿಡಗಳನ್ನು ನೆಡಲಿದ್ದಾರೆ. ಇಂದು ಮಣಿಪಾಲ ಎಂಪಿಎಂಸಿಯ 80 ಮಂದಿ ವಿದ್ಯಾರ್ಥಿಗಳು ಗಿಡನೆಡುತಿದ್ದಾರೆ ಎಂದರು.
ಇನ್ನು ಮುಂದೆ ಪ್ರತಿದಿನ ಉಡುಪಿ ಎಂಜಿಎಂ, ಪಿಪಿಸಿ, ಯುಪಿಎಂಸಿ ಹಾಗೂ ಕಟಪಾಡಿಯ ಎಸ್‌ವಿಎಸ್ ಕಾಲೇಜುಗಳ ವಿದ್ಯಾರ್ಥಿಗಳು ಗಿಡ ನೆಡಲಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಐದು ಗಿಡಗಳನ್ನು ನೆಡುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಕಾಶ್ ತಿಳಿಸಿದರು.
ಸದ್ಯಕ್ಕೆ ನಾವೀಗ ನೇರಳೆ, ಕಹಿಬೇವು, ಓಕ್, ಬೀಟೆ, ಬೆಂಗನ್, ಸೀತಾಫಲ, ಸೀಮಿತ ಸಂಖ್ಯೆಯ ಸಾಗುವಾನಿ, ಪುನುರ್ಪುಳಿ ಗಿಡಗಳನ್ನು ನೆಡುತಿದ್ದೇವೆ. ಮುಂದೆ ಲಭ್ಯವಿರುವ ಇತರ ಹಣ್ಣುಗಳ ಗಿಡಗಳನ್ನು ನೆಡುತ್ತೇವೆ ಎಂದರು.