ಜು.18ರಿಂದ ಅ.ಭಾ.ಮೀನುಗಾರ ಕಾಂಗ್ರೆಸ್ ಸಮಿತಿ ಸಭೆ
ಉಡುಪಿ, ಜು.16: ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆ ಅಂಬಲಪಾಡಿಯಲ್ಲಿರುವ ಹೊಟೇಲ್ ಕಾರ್ತಿಕ್ ಎಸ್ಟೇಟ್‌ನಲ್ಲಿ ಜು.18 ಮತ್ತು 19ರಂದು ನಡೆಯಲಿದೆಂದು ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಮಾಜಿ ಶಾಸಕ ಯು.ಆರ್.ಸಭಾಪತಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸುಮಾರು 80 ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಭೆಯನ್ನು ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಟಿ.ಎನ್.ಪ್ರತಾಪನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ರಾಕೇಶ್ ಮಲ್ಲಿ, ಜನಾರ್ದನ ತೋನ್ಸೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೀನುಗಾರ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಅಂತಿಮ ಅಂಗೀಕಾರವನ್ನು ಈ ಸಭೆಯಲ್ಲಿ ಪಡೆಯಲಾಗುವುದು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೀನುಗಾರ ಕಾಂಗ್ರೆಸ್ ಸಮಿತಿಯ ಸಭೆಯನ್ನು ಜು.19ರಂದು ಕರೆಯಲಾಗಿದೆ ಎಂದು ಸಭಾಪತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪೀರು ಸಾಹೇಬ್, ಕಾರ್ಯದರ್ಶಿ ಕಿರಣ್‌ಕುಮಾರ್ ಉದ್ಯಾವರ, ರಾಜ್ಯ ಕಾರ್ಯದರ್ಶಿ ಉಪೇಂದ್ರ ಮೆಂಡನ್, ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮನೋಜ್ ಕರ್ಕೇರ, ಗಣೇಶ್ ಕುಂದರ್, ಹಸನ ಸಾಬ್ ಮಲ್ಪೆ, ಮಧುಕರ ಸುವರ್ಣ, ವಿಲ್ಸನ್ ಸಿ. ವಡಬಾಂಡೇಶ್ವರ ಉಪಸ್ಥಿತರಿದ್ದರು.