×
Ad

‘ವಚನಭ್ರಷ್ಟರಾದರೆ ಮುಖ್ಯಮಂತ್ರಿ ವಿರುದ್ಧ ಹೋರಾಟ’

Update: 2018-07-16 22:20 IST

ಉಡುಪಿ, ಜು.16: ಕರಾವಳಿಯ ಮೀನುಗಾರರ ಕೂಗಿಗೆ ಸ್ಪಂಧಿಸಿರುವ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 15 ದಿನದೊಳಗೆ ಕರಾವಳಿಗೆ ಆಗಮಿಸಿ ಎರಡು ದಿನ ಇಲ್ಲೇ ಉಳಿದು ಮೀನುಗಾರ ಸಮುದಾಯದ ಜೊತೆ ಮಾತುಕತೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ದ.ಕ.ಮತ್ತು ಉಡುಪಿ ಮೀನು ಮಾರಾಟಗಾರರ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಕರಾವಳಿ ಪ್ರವಾಸ ಮಹತ್ವವನ್ನು ಪಡೆಯಲಿದ್ದು, 15 ದಿನದೊಳಗೆ ಕುಮಾರಸ್ವಾಮಿ ಉಡುಪಿಗೆ ಆಗಮಿಸಿ ಇಲ್ಲಿನ ಬೇಕು ಬೇಡಗಳನ್ನು ತಿಳಿದುಕೊಂಡು ಅವುಗಳಿಗೆ ಸ್ಪಂದಿಸಬೇಕು ಎಂದವರು ಹೇಳಿದರು.

ಕರಾವಳಿಗರ ಸಮಸ್ಯೆಗಳನ್ನು ಆಲಿಸಲು ಬಂದಾಗ, ಮೀನುಗಾರರ ಸಮುದಾಯಗಳ ಸಮಸ್ಯೆಗಳ ಜೊತೆಗೆ ಕರಾವಳಿ ಭಾಗದ ಬಹುಕಾಲದ ಬೇಡಿಕೆಗಳು, ಜಲ್ವಂತ ಸಮಸ್ಯೆಗಳನ್ನು ತಿಳಿದುಕೊಂಡು ಮೂರು ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಬಾರಿ ತಾವು ವಚನಭ್ರಷ್ಟರಾಗದೆ ಕರಾವಳಿಗರಿಗೆ ಕೊಟ್ಟ ಮಾತು ಉಳಿಸಿ ಕೊಳ್ಳುತ್ತೀರಿ ಎಂದು ನಂಬಿದ್ದೇವೆ. ಒಂದು ವೇಳೆ ನೀವು ಮತ್ತೆ ವಚನಭ್ರಷ್ಟ ರಾದರೆ ನಾವು ಇನ್ನಷ್ಟು ರಚನಾತ್ಮಕವಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಯಶ್ಪಾಲ್ ಸುವರ್ಣ ಎಚ್ಚರಿಸಿದ್ದಾರೆ.

ನಮ್ಮ ಹೋರಾಟಕ್ಕೆ ಭತ್ತ, ಅಡಿಕೆ, ತೆಂಗು, ರಬ್ಬರ್ ಬೆಳೆಗಾರರು, ಎಂಡೋ ಸಂತ್ರಸ್ತರು, ನೇತ್ರಾವತಿ ಉಳಿಸಿ ಹೋರಾಟಗಾರರು ಹಾಗೂ ವಿವಿಧ ತಾಲೂಕು ರಚನಾ ಹೋರಾಟ ಸಮಿತಿಗಳ ಮುಖಂಡರು ಕೈಜೋಡಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೈ ಭಾರ್ಗವ ಬಳಗದ ಅಜಿತ್ ಶೆಟ್ಟಿ ಕಿರಾಡಿ, ಮಂಜು ಕೊಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News