ಉಳ್ಳಾಲದಲ್ಲಿ ತೀವ್ರಗೊಂಡ ಕಡಲಿನ ಅಬ್ಬರ: ಹಲವಾರು ಮನೆಗಳಿಗೆ ಹಾನಿ

Update: 2018-07-16 17:01 GMT

ಉಳ್ಳಾಲ, ಜು. 16: ಕಳೆದ ಹಲವಾರು ದಿನಗಳಿಂದ ಉಳ್ಳಾಲ ಭಾಗದಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಸೋಮವಾರ ಉಳ್ಳಾಲದ ಕೈಕೋ, ಹಿಲೆರಿಯಾನಗರದಲ್ಲಿ ಕಡಲಿನ ಅಲೆಗಳ ಆರ್ಭಟದಿಂದ ಹಲವಾರು ಮನೆಗಳಿಗೆ ಭಾಗಶ: ಹಾನಿಯಾಗಿದೆ. ಅಲ್ಲದೆ ಕಡಲಿನ ಅಲೆಗಳಿಂದ ಹೆಚ್ಚು ಹಾನಿ ಗೊಂಡಿರುವ ಸುಮಾರು 35 ಕುಟುಂಬಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಂಡಿದ್ದಾರೆ.

ಸೋಮವಾರದ ಗಾಳಿ, ಮಳೆಯ ನಡುವೆ ಕಡಲಿನ ಅಲೆಗಳ ಆರ್ಭಟಕ್ಕೆ ಹಿಲೇರಿಯಾನಗರದ ಆಲಿಯಬ್ಬ , ಝೈನಾಬಿ, ಸಕೀನಾ , ಜಮೀಲಾ , ಸಾಕಿರಾ ಬಾನು, ರುಖಿಯಾ ಎಂಬವರ ಮನೆಗಳು ಸೇರಿದಂತೆ 14 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಅಪಾಯದ ಸ್ಥಿತಿಯಲ್ಲಿರುವ ಮನೆಗಳ ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅಗತ್ಯ ಇರುವ ಕುಟುಂಬಗಳಿಗೆ ಉಳ್ಳಾಲ ನಗರಸಭೆ ವತಿಯಿಂದ ಒಂಭತ್ತುಕೆರೆ ಸರಕಾರಿ ಶಾಲೆಯಲ್ಲಿ ನಗರಸಭೆಯ ವತಿಯಿಂದ ಗಂಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿದ್ದು, ಉಳ್ಳಾಲ ದರ್ಗಾ ವಠಾರದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿದು ಬಂದಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ

ಕಡಲ್ಕೊರೆತ ಸಮಸ್ಯೆಯಿಂದ ಕಂಗೆಟ್ಟ ಮುಕ್ಕಚ್ಚೇರಿ, ಕಿಲೆರಿಯಾನಗರ, ಕೈಕೋ ನಿವಾಸಿಗಳು ಸೋಮವಾರ ಉಳ್ಳಾಲ ನಗರಸಭೆಗೆ ತೆರಳಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಅಧಿಕಾರಿಗಳೇ ಬಂದು ಸಮಸ್ಯೆಯನ್ನು ಆಲಿಸಬೇಕು ಎಂದು ಒತ್ತಾಯಿಸಿದರು.

ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ

ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಕಡಲ್ಕೊರೆತದಿಂದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸೂಕ್ತ ಸ್ಥಳಗಳನ್ನು ಗುರುತಿಸಿ ಮೂರು ತಿಂಗಳ ಒಳಗೆ ನಿವೇಶನ ನೀಡಲಾಗುವದು ಅಷ್ಟರವರೆಗೆ ಅಪಾಯದ ಸ್ಥಳದಲ್ಲಿ ನಿಲ್ಲದಂತೆ ಹಾಗೂ ನಗರಸಭೆ ವತಿಯಿಂದ ಸೂಚಿಸುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುವಂತೆ ಸೂಚಿಸಿದ್ದಾರೆ.

ಉಚ್ಚಿಲ, ಪೆರಿಬೈಲು, ಬಟ್ಟಂಪಾಡಿ, ಸೋಮೇಶ್ವರ ಸಮುದ್ರ ತೀರದಲ್ಲಿಯೂ ಕಡಲಬ್ಬರ ಹೆಚ್ಚಿದ್ದು, ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿಗೆ ರಸ್ತೆಗೆ ಅಪ್ಪಳಿಸಲು ಆರಂಭಿಸಿದೆ. ಕಡಲ್ಕೊರೆತ ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ , ಕಂದಾಯ ನಿರೀಕ್ಷಕ ಜೋಸ್ಲಿನ್ ಸ್ಟೀಫನ್ , ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಗ್ರಾಮಕರಣಿಕರಾದ ಕೆ.ಪ್ರಮೋದ್ ಕುಮಾರ್, ಸಹಾಯಕ ನವನೀತ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಕಡಲ್ಕೊರೆತ ಸಂತ್ರಸ್ಥರಿಗೆ ನಿವೇಶನ: ಖಾದರ್ 

ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಸುಮಾರು 41 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇವರಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ.

ಅವರು ಇಂದು ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಡಲಕೊರೆತದಿಂದ ಹೆಚ್ಚು ಅಪಾಯದಲ್ಲಿರುವ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ 15 ದಿನದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಮಂಜೂರುಗೊಳಿಸಬೇಕು ಎಂದು ಮಂಗಳೂರು ತಹಶೀಲ್ದಾರ್‌ಗೆ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News