×
Ad

ಸಂಚಾರಿ ಗ್ರಂಥಾಲಯಗಳು ಸ್ವಸ್ಥ ಸಮಾಜದ ಗೌರವದ ಸಂಕೇತ: ಪ್ರೊ. ಸೋಮಣ್ಣ

Update: 2018-07-16 23:19 IST

ಮಂಗಳೂರು, ಜು. 16: ಶಾಂತಿಯ ಸಂದೇಶ ಸಾರುವ ಸಂಚಾರಿ ಗ್ರಂಥಾಲಯಗಳು ಸ್ವಸ್ಥ ಸಮಾಜದ ಗೌರವದ ಸಂಕೇತವಾಗಿದೆ.  ಆಧುನಿಕ ಜಗತ್ತಿನ ಎಲ್ಲಾ ದೇಶಗಳಲ್ಲೂ, ಭಾರತದ ಎಲ್ಲಾ ಪ್ರದೇಶಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳಿವೆ.  ಆದರೆ ತಾಂತ್ರಿಕತೆಯ ಬೆನ್ನ ಹಿಂದೆ ಓಡುತ್ತಿರುವ ಪ್ರಸ್ತುತ ಸಮಾಜಕ್ಕೆ ಇಂದು ಸಂಚಾರಿ ಗ್ರಂಥಾಲಯಗಳು ಅತೀ ಅಗತ್ಯ ಯೋಜನೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಸೋಮಣ್ಣ ಹೇಳಿದರು.

ತೊಕ್ಕೊಟ್ಟಿನ ಬಬ್ಬುಕಟ್ಟೆಯ ಹಿರಾ ಕ್ಯಾಂಪಸ್‍ನಲ್ಲಿ ಮಂಗಳೂರಿನ ಶಾಂತಿ ಪ್ರಕಾಶನದ ವತಿಯಿಂದ ಶಾಂತಿ ಸಾಹಿತ್ಯವಾಹಿನಿ-4 ಯನ್ನು ಉದ್ಘಾಟನೆಗೈದು, ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪುಸ್ತಕ ಓದುವಿಕೆಯ ಮೂಲಕ ವಿದ್ಯಾರ್ಥಿಗಳು ತಮ ಜ್ಞಾನವನ್ನು ಅಭಿವೃದ್ಧಿಗೊಳಿಸಬೇಕು.  ಸಾಹಿತ್ಯದ ಮುಖಾಂತರ ವಿದ್ಯಾರ್ಥಿಗಳನ್ನು ಅವರ ಮನಸ್ಸುಗಳನ್ನು ಬದಲಾಯಿಸಬೇಕಾಗಿದೆ.  ಅವರವರ ತಲೆಗೆ ಅವರವರದೇ ಕೈ ಆಧಾರವಾಗಿದೆ.  ಆದುದರಿಂದ ವಿದ್ಯಾರ್ಥಿಗಳು ಅವರ ಭವಿಷ್ಯವನ್ನು ಅವರೇ ರೂಪಿಸಬೇಕು ಎಂದು ವಿದ್ಯಾರ್ಥಿನಿಗಳನ್ನುದ್ದೇಶಿಸಿ ಹಿತನುಡಿಗಳನ್ನಾಡಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಪ್ರದೀಪ್ ಕುಮಾರ ಕಲ್ಕೂರ ಮಾತನಾಡಿ, ಎಲ್ಲರನ್ನು ಸೃಷ್ಟಿಸಿದ ದೇವನೊಬ್ಬನೆ. ಆದುದರಿಂದ ಜಗತ್ತಿನಾದ್ಯಂತ  ಶಾಂತಿ ಮತ್ತು ಭಾವೈಕ್ಯದ ಸಂದೇಶವನ್ನು ಸಾರಬೇಕಾದುದು ಪ್ರತಿಯೋರ್ವ ಪ್ರಜೆಯ ಕರ್ತವ್ಯವಾಗಿದೆ.  ಆಧುನಿಕ ಜಗತ್ತಿನ ತಾಂತ್ರಿಕತೆಯ ನಡುವೆಯೂ ನಾವೆಲ್ಲರೂ ಪುಸ್ತಕ ಪ್ರೇಮಿಗಳಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೀಸ್ ಆ್ಯಂಡ್ ಹ್ಯೂಮಾನಿಟಿ ಫಾರಂನ ಅಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್‍ರವರು, ಎಲ್ಲರೂ ಶಾಂತಿಯ ಸಂದೇಶವನ್ನು ಸಾರುವ ಕೃತಿಗಳನ್ನು ನಿರಂತರವಾಗಿ ಓದಬೇಕು.  ಅಲ್ಲದೆ, ಸಮಾಜಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುವ ಶಾಂತಿ ಪ್ರಿಯರು ನಾವಾಗಬೇಕು ಎಂದು ಸಭೆಯನ್ನುದ್ದೇಶಿಸಿ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ಚೇಂಬರ್  ಆ್ಯಂಡ್ ಕಾಮರ್ಸ್ ಇಂಡಸ್ಟ್ರಿಯ ಅಧ್ಯಕ್ಷರಾದ ಹಾಜಿ. ಎಸ್. ಎಂ. ರಶೀದ್ ಹಾಗೂ ಬದ್ರಿಯಾ ಪಿ.ಯು. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಇಸ್ಮಾಯೀಲ್ ಎಂ, ಉಳ್ಳಾಲ ನಗರಸಭೆಯ ಕೌನ್ಸಿಲರ್ ಭಾರತಿ ಎಂ. ಮಾತನಾಡಿದರು.

ಉಳ್ಳಾಲ ನಗರಸಭೆಯ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ಸರಿತಾ ಜೀವನ್ ಕುಮಾರ್, ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಎಂ.ಆರ್., ಶಾಂತಿ ಪ್ರಕಾಶನದ ಉಪಾಧ್ಯಕ್ಷರಾದ ಜ. ಕೆ.ಎಂ.ಶರೀಫ್, ಶಾಂತಿ ಪ್ರಕಾಶನದ ಕಾರ್ಯದರ್ಶಿ ಎಂ. ಸಾದುಲ್ಲ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಕಾರ್ಯದರ್ಶಿ ಕೆ.ಎಂ. ಅಶ್ರಫ್, ಶಾಂತಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಕೆ. ಅಬ್ದುರ್ರಹ್ಮಾನ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞÂಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಹಿರಾ ಸಂಸ್ಥೆಯ ವಿದ್ಯಾರ್ಥಿನಿಯರು ಶಾಂತಿ ಗೀತೆಯನ್ನು ಹಾಡಿದರು. ಶಾಲೆಯ ಪುಟಾಣಿಗಳು ಪ್ರಾರ್ಥನಾಗೀತೆಯನ್ನು ಹಾಡಿದರು.ಮುಝಮ್ಮಿಲ್ ಉಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News