‘ಪುರಾವೆ’ ಸರಿ ಇಲ್ಲದಿದ್ದರೆ ವೀಸಾ ಅರ್ಜಿಯೇ ವಜಾ

Update: 2018-07-16 18:31 GMT

ಪುರಾವೆ’ ವಾಶಿಂಗ್ಟನ್, ಜು. 16: ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಅಮೆರಿಕದ ಟ್ರಂಪ್ ಆಡಳಿತ, ಕೆಲವೊಂದು ನಿರ್ದಿಷ್ಟ ಸನ್ನಿವೇಶಗಳಲ್ಲಿ ವೀಸಾ ಅರ್ಜಿಗಳನ್ನು ತಿರಸ್ಕರಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಿದೆ.

ಅರ್ಜಿದಾರರು ಅಗತ್ಯದ ‘ಆರಂಭಿಕ ಪುರಾವೆ’ಯನ್ನು ಸಲ್ಲಿಸದಿದ್ದರೆ ಅಥವಾ ಕೋರಲಾದ ವೀಸಾಕ್ಕೆ ಅರ್ಹತೆಯನ್ನು ಸಾಬೀತುಪಡಿಸಲು ವಿಫಲರಾದರೆ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ.

ಸೆಪ್ಟಂಬರ್ 11ರಿಂದ ಜಾರಿಗೆ ಬರಲಿರುವ ನೂತನ ನಿಯಮವು ಎಚ್-1ಬಿ ಉದ್ಯೋಗಿಗಳನ್ನು ಪ್ರಾಯೋಜಿಸುವ ಕಂಪೆನಿಗಳ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿನ ದಾಖಲೆಗಳನ್ನು ಸಲ್ಲಿಸಲು ಅಥವಾ ಕೋರಲಾದ ವೀಸಾಕ್ಕೆ ಅರ್ಹತೆಯನ್ನು ಸಾಬೀತುಪಡಿಸುವ ವಿವರಣೆಗಳನ್ನು ನೀಡಲು ಕಂಪೆನಿಗಳಿಗೆ ಎರಡನೇ ಅವಕಾಶ ಲಭಿಸುವ ಸಾಧ್ಯತೆ ಕಡಿಮೆ.

ಕೆಲವು ಪ್ರಕರಣಗಳಲ್ಲಿ, ವೀಸಾ ಅರ್ಜಿಯ ಸಾರಾಸಗಟು ತಿರಸ್ಕಾರ (ಉದಾಹರಣೆಗೆ; ಎಚ್-1ಬಿ ವೀಸಾ ವಿಸ್ತರಣೆ ಕೋರುವ ಅರ್ಜಿ)ವು ಉದ್ಯೋಗಿಯ ಗಡಿಪಾರಿಗೂ ಕಾರಣವಾಗಬಹುದು.

 ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್)ಯು ನೂತನ ನೀತಿಯನ್ನು ಜುಲೈ 13ರಂದು ಘೋಷಿಸಿದೆ.

ವಿವರಣೆಯಲ್ಲಿ ಗೊಂದಲ

 ‘‘ಮೊದಲು, ಅರ್ಜಿದಾರನಿಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ಕೊಡದೆ ಅವರ ವೀಸಾ ಅರ್ಜಿಯನ್ನು ತಿರಸ್ಕರಿಸಲು ಅಧಿಕಾರಿಗಳಿಗೆ ಅಧಿಕಾರವಿರಲಿಲ್ಲ. ಈಗ ಯಾವುದೇ ವಿಚಾರಣೆಯಿಲ್ಲದೆ ವೀಸಾ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ. ಪುರಾವೆಗಳಿಗೆ ಕೋರಿಕೆ ಸಲ್ಲಿಸದೆ ವೀಸಾ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರವನ್ನು ಪರಿಷ್ಕೃತ ನೀತಿಯು ಅಧಿಕಾರಿಗಳಿಗೆ ನೀಡುತ್ತದೆ. ಆದರೆ, ಅಗತ್ಯ ‘ಆರಂಭಿಕ ಪುರಾವೆ’ಗಳನ್ನು ಅರ್ಜಿದಾರ ಸಲ್ಲಿಸದಿದ್ದರೆ ಮಾತ್ರ ಹೀಗೆ ಮಾಡಬಹುದಾಗಿದೆ. ಆದರೆ, ‘ಆರಂಭಿಕ ಪುರಾವೆ’ಗೆ ಯಾವ ವಿವರಣೆ ನೀಡಲಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ’’ ಎಂದು ವಲಸೆ ಕಾನೂನುಗಳಲ್ಲಿ ಪರಿಣತಿ ಹೊಂದಿರುವ ಜಾಗತಿಕ ಸಂಸ್ಥೆ ‘ಫ್ರಾಗೊಮನ್’ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News