ಬಂಟ್ವಾಳ: 3,850 ವಸತಿ, ನಿವೇಶನರಹಿತ ಫಲಾನುಭವಿಗಳಿಂದ ಅರ್ಜಿ
ಬಂಟ್ವಾಳ, ಜು. 17: ಸರಕಾರದ ಎಲ್ಲರಿಗೂ ಸೂರು ಯೋಜನೆಯ 2016-17ರ ಸಾಲಿನಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ವಸತಿ ಹಾಗೂ ನಿವೇಶನರಹಿತ ಬೇಡಿಕೆ ಸಮೀಕ್ಷೆ ಕಾರ್ಯವನ್ನು ಈಗಾಗಲೇ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಸುಮಾರು 3,850 ಫಲಾನುಭವಿಗಳ ಅರ್ಜಿಗಳು ದಾಖಲಾಗಿದೆ ಎಂದು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದ್ದಾರೆ.
ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಅವರು ಇದೀಗ ರಾಜ್ಯದ ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ/ನಿವೇಶನ ರಹಿತ ಬಡವರ ಸ್ವ-ವಿವರಗಳ ಸಮೀಕ್ಷೆಗೆ ಮುಂದಾಗಿದ್ದು, ಈ ಸಮೀಕ್ಷೆಯು ಪುರಸಭಾ ವ್ಯಾಪ್ತಿಗೆ ಒಳಪಡದೆ ಕೇವಲ ಗ್ರಾಮ ಪಂಚಾಯ್ ವ್ಯಾಪ್ತಿಗೆ ಮಾತ್ರ ಸೀಮಿತ ವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ತಪ್ಪು ತಿಳುವಳಿಕೆಯಿಂದ ಬಂಟ್ವಾಳ ಪುರಸಭೆ ಕಚೇರಿಗೆ ಅರ್ಜಿ ಸಲ್ಲಿಕೆಗಾಗಿ ಜನಸಾಮಾನ್ಯರು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ಪುರಸಭಾ ವ್ಯಾಪ್ತಿಯ ನಾಗರಿಕರು ಗೊಂದಲಕ್ಕೀಡಾಗದೆ, ಮುಂದಿನ ದಿನಗಳಲ್ಲಿ ಸರಕಾರವು ಪುರಸಭೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದರೆ ಯೋಜನೆಯ ಮಾಹಿತಿಯೊಂದಿಗೆ ಪುರಸಭಾ ನಿವಾಸಿಗಳಿಗೆ ತಿಳಿಸಲಾಗುವುದು ಎಂದು ರಾಮಕೃಷ್ಣ ಆಳ್ವ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.