×
Ad

ಬ್ರಿಟಿಶ್ ಮದ್ಯವರ್ತಿಯ ವಿರುದ್ಧ ಸಾಕ್ಷಿ ಒದಗಿಸಲು ಭಾರತ ವಿಫಲ: ಯುಎಇ ನ್ಯಾಯಾಲಯ

Update: 2018-07-17 21:07 IST

ಹೊಸದಿಲ್ಲಿ, ಜು.17: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಪ್ರಕರಣದಲ್ಲಿ ಬ್ರಿಟಿಶ್ ಮೂಲದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಜೇಮ್ಸ್ ವಿರುದ್ಧ ಸಾಕ್ಷಿ ಒದಗಿಸುವಲ್ಲಿ ಭಾರತೀಯ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಯುಎಇ ನ್ಯಾಯಾಲಯ ತಿಳಿಸಿದೆ. ಆಮೂಲಕ 3,600 ಕೋಟಿ ರೂ. ಮೊತ್ತದ ಹಗರಣದ ಪ್ರಮುಖ ಕೊಂಡಿ ಮತ್ತು ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಜೇಮ್ಸ್‌ನನ್ನು ಗಡಿಪಾರು ಮಾಡಬೇಕು ಎಂಬ ಭಾರತದ ಮನವಿಗೆ ದೊಡ್ಡ ಹಿನ್ನಡೆಯಾಗಿದೆ.

ಮೈಕಲ್ ವಿರುದ್ಧ ಭಾರತ 2018ರ ಮೇ 19ರ ಒಳಗಾಗಿ ಯುಎಇ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಒದಗಿಸಬೇಕಿತ್ತು. ಆದರೆ ಹೀಗೆ ಮಾಡಲು ಭಾರತೀಯ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಮೈಕಲ್ ಪರ ವಕೀಲರು ತಿಳಿಸಿದ್ದಾರೆ.

ಮೈಕಲ್ ವಿರುದ್ಧ ಭಾರತದ ಬಳಿ ಯಾವುದೇ ಸಾಕ್ಷಿಯಿಲ್ಲ ಎಂದು ಮೈಕಲ್ ಪರ ವಕೀಲೆ ರೋಸ್ಮೆರಿ ಪ್ಯಾಟ್ಝಿ ಡೊಸ್ ಅಂಜೋಸ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವಾಗಲೀ, ಸಿಬಿಐಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಭಾರತೀಯ ತನಿಖಾ ಸಂಸ್ಥೆಗಳ ಪ್ರಕಾರ, ಹೆಲಿಕಾಪ್ಟರ್ ಗುತ್ತಿಗೆಯು ಆಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಸಿಗುವಂತೆ ಮಾಡಲು ಮೈಕಲ್ 235 ಕೋಟಿ ರೂ. ಲಂಚ ಪಡೆದುಕೊಂಡಿದ್ದರು. 1997 ಮತ್ತು 2013ರ ಮಧ್ಯೆ ಅವರು ಭಾರತಕ್ಕೆ 300 ಬಾರಿ ಭೇಟಿ ನೀಡಿದ್ದರು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಕಾರ, ಇಷ್ಟೊಂದು ಬೃಹತ್ ಮೊತ್ತವನ್ನು ಮೈಕಲ್ಗ್ ಭಾರತ ಮತ್ತು ವಿದೇಶಗಳಲ್ಲಿರುವ ಕಂಪೆನಿಗಳ ಸಮೂಹದ ಮೂಲಕ ಪಾವತಿಸಲಾಗಿತ್ತು.

ಈ ಪ್ರಕರಣದಲ್ಲಿ ಸಿಬಿಐ, ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅವರ ಸೋದರ ಸಂಬಂಧಿ ಸಂಜೀವ್ ತ್ಯಾಗಿ ಅಲಿಯಾಸ್ ಜೂಲಿ, ಆಗಿನ ವಾಯುಪಡೆ ಉಪಮುಖ್ಯಸ್ಥ ಜೆ.ಎಸ್ ಗುಜ್ರಾಲ್ ಮತ್ತು ವಕೀಲ ಗೌತಮ್ ಕೈತಾನ್‌ಅವರ ಹೆಸರನ್ನು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News