ಮಕ್ಕಳ ಮಾರಾಟ ಹಗರಣ: ಎಲ್ಲ ಮದರ್ ತೆರೆಸಾ ಮಕ್ಕಳ ಆರೈಕೆ ಕೇಂದ್ರಗಳ ತಪಾಸಣೆಗೆ ಆದೇಶ
ಹೊಸದಿಲ್ಲಿ, ಜು.17: ಮದರ್ ತೆರೆಸಾ ಅವರ ಮಿಶನರೀಸ್ ಆಫ್ ಚ್ಯಾರಿಟಿ ಸಂಸ್ಥೆಯು ದೇಶಾದ್ಯಂತ ನಡೆಸುತ್ತಿರುವ ಮಕ್ಕಳ ಆರೈಕೆ ಕೇಂದ್ರಗಳನ್ನು ತಕ್ಷಣವೇ ತಪಾಸಣೆಗೊಳಪಡಿಸುವಂತೆ ಸರಕಾರವು ಎಲ್ಲ ರಾಜ್ಯಗಳಿಗೆ ನಿರ್ದೇಶ ನೀಡಿದೆ. ಜಾರ್ಖಂಡ್‌ನ ಮಿಶನರೀಸ್ ಆಫ್ ಚ್ಯಾರಿಟಿಯ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿ ದತ್ತು ಸ್ವೀಕಾರಕ್ಕಾಗಿ ಮಕ್ಕಳ ಮಾರಾಟ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.
ಎಲ್ಲ ಮಕ್ಕಳ ಆರೈಕೆ ಸಂಸ್ಥೆಗಳು ಇನ್ನೊಂದು ತಿಂಗಳೊಳಗೆ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್‌ಎ)ದೊಂದಿಗೆ ನೋಂದಣಿಯನ್ನು ಹೊಂದಿರುವಂತೆ ಮತ್ತು ಲಿಂಕ್ ಆಗಿರುವಂತೆ ನೋಡಿಕೊಳ್ಳುವಂತೆಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಅವರು ರಾಜ್ಯ ಸರಕಾರಗಳಿಗೆ ಸೂಚಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ದತ್ತುಸ್ವೀಕಾರಕ್ಕೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ರಾಂಚಿಯಲ್ಲಿರುವ ಮದರ್ ತೆರೆಸಾರ ನಿರ್ಮಲ ಹೃದಯ ಕೇಂದ್ರದ ಓರ್ವ ನನ್ ಮತ್ತು ಓರ್ವ ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದರು. ಮೂವರು ಮಕ್ಕಳನ್ನು ಮಾರಾಟ ಮಾಡಲಾಗಿದೆ, ಆದರೆ ಒಂದು ಶಿಶುವನ್ನು ದತ್ತುಸ್ವೀಕಾರಕ್ಕಾಗಿ ಉಚಿತವಾಗಿ ನೀಡಲಾಗಿದೆ ಎಂದು ನನ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಳು. ಮೂವರು ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು.
ರಾಂಚಿ ಕೇಂದ್ರದಲ್ಲಿ ಮಕ್ಕಳ ಮಾರಾಟ ಜಾಲ ಬಯಲಿಗೆ ಬಂದ ಬಳಿಕ ಜಾರ್ಖಂಡ್‌ನಾದ್ಯಂತ ಎಲ್ಲ ಮಕ್ಕಳ ಆರೈಕೆ ಕೇಂದ್ರಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು.
ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಬಾಲ ನ್ಯಾಯ ಕಾಯ್ದೆಯಡಿ ಎಲ್ಲ ಮಕ್ಕಳ ಆರೈಕ ಸಂಸ್ಥೆಗಳು ಸಿಎಆರ್‌ಎದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷದ ಡಿಸೆಂಬರ್‌ನಿಂದೀಚಿಗೆ ಸುಮಾರು 2,300 ಇಂತಹ ಸಂಸ್ಥೆಗಳು ಸಿಎಆರ್‌ಎಗೆ ಲಿಂಕ್ ಮಾಡಿಕೊಂಡಿವೆ. ಆದರೆ ಸುಮಾರು 4,000 ಸಂಸ್ಥೆಗಳು ಇನ್ನೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಎಂದು ಸಚಿವಾಲಯವು ತಿಳಿಸಿದೆ.
2,000 ಸಂಸ್ಥೆಗಳು ಸಿಎಆರ್‌ಎಗೆ ಲಿಂಕ್ ಹೊಂದಿದ್ದರೂ ಅವುಗಳಲ್ಲಿ ಲಭ್ಯ ಮಕ್ಕಳನ್ನು ಇನ್ನೂ ದತ್ತು ವ್ಯವಸ್ಥೆಯೊಳಗೆ ತಂದಿಲ್ಲದಿರುವುದಕ್ಕೆ ಮನೇಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿಯ ನೋಂದಣಿಗೊಂಡ ಮತ್ತು ನೋಂದಣಿಗೊಳ್ಳದ ಎಲ್ಲ ಮಕ್ಕಳ ಆರೈಕೆ ಕೇಂದ್ರಗಳಲ್ಲಿ 2.3 ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತಿಳಿಸಿದೆ.