ತ್ರಿವಳಿ ತಲಾಕ್ ಮಸೂದೆ ಅಂಗೀಕಾರ ನಮ್ಮ ಆದ್ಯತೆ: ಕೇಂದ್ರ ಸಚಿವ ಅನಂತ್‌ ಕುಮಾರ್

Update: 2018-07-17 15:53 GMT

ಹೊಸದಿಲ್ಲಿ, ಜು.17: ಲೋಕಸಭೆಯಿಂದ ಅಂಗೀಕೃತವಾಗಿ, ರಾಜ್ಯಸಭೆಯಲ್ಲಿ ಚರ್ಚೆಯಾಗಬೇಕಿರುವ ತ್ರಿವಳಿ ತಲಾಕ್ ಮಸೂದೆಯನ್ನು ಅಂಗೀಕರಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಸಂಸತ್‌ ಭವನದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಬಿಸಿ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆಯನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಲಾಗುವುದು. ಹಾಗೆಯೇ, ವೈದ್ಯಕೀಯ ಶಿಕ್ಷಣದ ರಾಷ್ಟ್ರೀಯ ಆಯೋಗ ಮಸೂದೆ ಹಾಗೂ ತೃತೀಯ ಲಿಂಗಿಗಳ ಮಸೂದೆಯನ್ನು ಮಂಡಿಸಲಾಗುವುದು ಎಂದರು.

ನಾಳೆಯಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನ ಸಮಪರ್ಕವಾಗಿ ನಡೆಯಲು ಸಹಕರಿಸುವುದಾಗಿ ಪ್ರತಿಪಕ್ಷಗಳ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂಗಾರು ಅಧಿವೇಶನ ಸರಿಯಾಗಿ ನಡೆಯಲು ಸಹಕರಿಸುವಂತೆ ಪ್ರಧಾನಿ, ಪ್ರತಿಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷಗಳು ಯಾವುದೇ ವಿಷಯಗಳನ್ನು ಮಂಡಿಸಬಹುದಾಗಿದೆ. ಇದಕ್ಕೆ ಸಮಪರ್ಕವಾಗಿ ಉತ್ತರಿಸಲು ಕೇಂದ್ರ ಸರಕಾರ ಸಿದ್ಧವಿದೆ. ಸಂಸತ್ ಅಧಿವೇಶನ ಸರಿಯಾಗಿ ನಡೆಯಲಿ ಎಂದು ಜನರು ಆಶಿಸುತ್ತಾರೆ. ಇದನ್ನು ಜನಪ್ರತಿನಿಧಿಗಳಾದ ನಾವು ಖಚಿತಪಡಿಸಬೇಕಾಗಿದೆ ಎಂದು ಅನಂತ್‌ ಕುಮಾರ್ ಹೇಳಿದರು.

ಈ ಬಾರಿಯ ಅಧಿವೇಶನದಲ್ಲಿ ಹಲವಾರು ಮಹತ್ವದ ಶಾಸನಾತ್ಮಕ ಅಂಶಗಳನ್ನು ಚರ್ಚೆಗೆ ಕೇಂದ್ರ ಸರಕಾರ ತರಲು ಯೋಜಿಸಿದೆ. ಈ ನಿಟ್ಟಿನಲ್ಲಿ ಈ ಮಳೆಗಾಲದ ಅಧಿವೇಶನ ಸಮರ್ಪಕವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯಸಭಾ ಉಪಸಭಾಪತಿ ಪಿ.ಜೆ.ಕುರಿಯನ್ ಅವರ ಅಧಿಕಾರಾವಧಿ ಕೊನೆಯಾಗುವುದರಿಂದ, ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೂ ಚುನಾವಣೆಯನ್ನು ಕೈಗೊಳ್ಳಲಾಗುವುದು ಎಂದು ಅನಂತ್‌ ಕುಮಾರ್ ತಿಳಿಸಿದರು.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್, ಎನ್‌ಸಿಪಿ ಮುಖಂಡ ಶರದ್ ಪವಾರ್, ಸಿಪಿಐ ಮುಖಂಡ ಡಿ.ರಾಜಾ ಸೇರಿದಂತೆ ಇನ್ನಿತರ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News