ಹುಸೇನಬ್ಬ ಪ್ರಕರಣ: ದೀಪಕ್ ಹೆಗ್ಡೆ ಜಾಮೀನು ಅರ್ಜಿ ತಿರಸ್ಕೃತ
ಉಡುಪಿ, ಜು.17: ಪೆರ್ಡೂರು ದನದ ವ್ಯಾಪಾರಿ ಹುಸೇನಬ್ಬ ಕೊಲೆ ಪ್ರಕರಣದ ಆರೋಪಿ ಪೆರ್ಡೂರಿನ ದೀಪಕ್ ಹೆಗ್ಡೆ ಎಂಬಾತನ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು ತಿರಸ್ಕರಿಸಿ ಆದೇಶ ನೀಡಿದೆ.
ಬಂಧಿತನಾಗಿ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೀಪಕ್ ಹೆಗ್ಡೆ ವಕೀಲ ಅರುಣ್ ಬಂಗೇರರ ಮೂಲಕ ಜೂ.19ರಂದು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪಣೆ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಜು.13ರಂದು ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಜು.17ಕ್ಕೆ ಕಾಯ್ದಿರಿಸಿ ಆದೇಶ ನೀಡಿದರು.
ಅದರಂತೆ ಇಂದು ಆದೇಶ ನೀಡಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಆರೋಪಿ ದೀಪಕ್ ಹೆಗ್ಡೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಹುಸೇನಬ್ಬರಿಗೆ ಮನೆಯ ದನವನ್ನು ಮಾರಾಟ ಮಾಡಿ, ಬಳಿಕ ಜಾನುವಾರು ಸಾಗಾಟದ ಬಗ್ಗೆ ಬಜರಂಗದಳದವರಿಗೆ ಮಾಹಿತಿ ನೀಡಿದ್ದ ದೀಪಕ್ ಹೆಗ್ಡೆಯನ್ನು ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದರು.