ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಉಡುಪಿ, ಜು.17: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2018-19ರ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ) ಜನಾಂಗದವರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಸ್ವಯಂ ಉದ್ಯೋಗ, ಶ್ರಮಶಕ್ತಿ ಸಾಲ, ಅರಿವು (ವಿದ್ಯಾಭ್ಯಾಸ ಸಾಲ), ಕಿರು (ಮೈಕ್ರೊ)ಸಾಲ ಮತ್ತು ಸಹಾಯಧನ, ಗಂಗಾಕಲ್ಯಾಣ, ಕೃಷಿ ಭೂಮಿ ಖರೀದಿ, ಪಶು ಸಂಗೋಪನಾ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ, ಪ್ರವಾಸಿ ಸ್ವಯಂ ಉದ್ಯೋಗ (ಕೇರಳ ಮಾದರಿ), ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆ, ಮನೆ-ಮಳಿಗೆ ಯೋಜನೆ, ಆಟೋಮೊಬೈಲ್ ಸರ್ವಿಸ್, ಕೃಷಿ ಯಂತ್ರೋಪಕರಣ ಖರೀದಿ ಸಹಾಯಧನ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ 81,000 ರೂ. ಮತ್ತು ನಗರ ಪ್ರದೇಶದವರಿಗೆ 1,03,000 ರೂ.ಮೀರಿರಬಾರದು. ಅರಿವು ಯೋಜನೆ ಯಡಿ 6,00,000 ರೂ., ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ (ಕೇರಳ ಮಾದರಿ) ಯೋಜನೆಯಡಿ ಆದಾಯ ಮಿತಿ 4,50,000ರೂ. ಆಗಿದೆ.
ಅರ್ಜಿದಾರರ ವಯಸ್ಸು ಕನಿಷ್ಟ 18 ವರ್ಷದಿಂದ ಗರಿಷ್ಟ 55 ವರ್ಷದೊ ಳಗಿರಬೇಕು. ಪಶು ಸಂಗೋಪನಾ ಯೋಜನೆ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ ಯೋಜನೆ(ಕೇರಳ ಮಾದರಿ), ಕೃಷಿ ಯಂತ್ರೋಪಕರಣ ಖರೀದಿ ಯೋಜನೆ, ಆಟೋಮೊಬೈಲ್ ಸರ್ವಿಸ್ ತರಬೇತಿ ಯೋಜನೆ, ಮತುತಿ ಮನೆ-ಮಳಿಗೆ ಯೋಜನೆಯಡಿ ಅರ್ಜಿದಾರ ವಯಸ್ಸು 18ರಿಂದ 45ವರ್ಷಗಳು.
ನಿಗಮದ ಯೋಜನೆಯಡಿ ಶೇ.33ರಷ್ಟು ಮಹಿಳೆಯರಿಗೆ, ಶೇ.3ರಷ್ಟು ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಮೀಸಲಾತಿ ಇರುತ್ತದೆ. ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿಗಳನ್ನು ವೆಬ್‌ಪೇಜ್ ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆಗೆ-kmdc.kar.nic.in ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಇಲ್ಲಿಗೆ ಆ.31 ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಉಡುಪಿ ಇವರ ಪ್ರಕಟಣೆ ತಿಳಿಸಿದೆ.