ಉಳ್ಳಾಲದಲ್ಲಿ ಮುಂದುವರಿದ ಕಡಲ್ಕೊರೆತದ ಆರ್ಭಟ: ಆತಂಕಗೊಂಡ ಕಡಲತಡಿಯ ಜನರು
ಉಳ್ಳಾಲ, ಜು. 17: ಕಳೆದ ಕೆಲವು ದಿನಗಳಿಂದ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತದ ಆರ್ಭಟ ತೀವ್ರಗೊಂಡಿದ್ದು, ಮಂಗಳವಾರವೂ ಉಳ್ಳಾಲದ ಕೈಕೋ, ಕಿಲೆರಿಯಾನಗರದಲ್ಲಿ ಸಮುದ್ರ ರೌದ್ರಾವತಾರ ತೋರಿದ್ದು ಕೈಕೋ ಬಳಿ ಹಲವಾರು ಮನೆಗಳು ಹಾನಿಗೊಂಡು ಭೀಫಾತುಮ್ಮ ಎಂಬವರ ಮನೆ ಸಮುದ್ರ ಪಾಲಾಗಿದೆ.
ಕಳೆದ ಕೆಲವು ದಿನಗಳಿಂದ ಉಳ್ಳಾಲದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರದ ಅಲೆಗಳು ಉಳ್ಳಾಲದ ಕೈಕೋ, ಕಿಲೇರಿಯಾನಗರ, ಮುಕ್ಕಚ್ಚೇರಿ, ಸಿಗ್ರೌಂಡ್, ಸೋಮೇಶ್ವರ ಉಚ್ಚಿಲದ ಪೆರಿಬೈಲು ಬಳಿ ದಡಕ್ಕಪ್ಪಳಿಸುತ್ತಿವೆ. ಕೈಕೋ ಮತ್ತು ಕಿಲೇರಿಯಾನಗರದಲ್ಲಿ ಮನೆಗಳು ಕುಸಿದರೆ, ಪೆರಿಬೈಲು ಬಳಿ ರಸ್ತೆ ಕುಸಿಯುವ ಭೀತಿಯಲ್ಲಿತ್ತು. ಸಮುದ್ರದ ಆಲೆಗಳು ಮಂಗಳವಾರವೂ ಮುಂದುವರೆದಿದ್ದು ಬೀಫಾತುಮ್ಮ ಅವರ ಮನೆ ಕುಸಿಯುವ ಮೂಲಕ ಈ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಲ್ಲಿ 15 ಮನೆಗಳು ಕುಸಿದಿವೆ.
ಸೋಮೇಶ್ವರ ಪೆರಿಬೈಲು ಬಳಿ ಮಂಗಳವಾರ ತಾತ್ಕಾಳಿಕ ಕಲ್ಲು ಹಾಕುವ ಕಾರ್ಯ ಅರಂಭಗೊಂಡಿದೆ. ಉಳ್ಳಾಲ ಕೈಕೋದಲ್ಲಿ ಹಾನಿಯಾದ ಮನೆಗಳಿಂದ ಎಲ್ಲರೂ ಸ್ಥಳಾಂತರಗೊಂಡಿದ್ದಾರೆ ಹಾಗೂ ಆಪಾಯದಲ್ಲಿರುವ ಕೆಲವು ಮನೆಗಳ ಸದಸ್ಯರು ಹಗಲಿನಲ್ಲಿ ಮನೆಯಲ್ಲಿದುಕೊಂಡು ಸಂಜೆ ವೇಳೆಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗಂಜಿ ಕೇಂದ್ರಕ್ಕೆ ಜನರಿಲ್ಲ : ಒಂಭತ್ತುಕೆರೆ ಶಾಲೆಯಲ್ಲಿ ಉಳ್ಳಾಲ ನಗರಸಭೆಯಿಂದ ಗಂಜಿಕೇಂದ್ರವನ್ನು ಅರಂಭಿಸಲಾಗಿದ್ದರೂ, ಜನರು ಆತ್ತ ಕಡೆ ಸುಳಿದಿಲ್ಲ. ಉಳ್ಳಾಲ ದರ್ಗಾದಲ್ಲೂ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರೆ ನಿರಾಶ್ರಿತರು ಸಂಬಂಧಿಗಳ ಮನೆಗಳಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಶಾಶ್ವತ ಕಾಮಗಾರಿ ನಡೆದ ಮೊಗವೀರಪಟ್ಣದಲ್ಲೂ ಮನೆಗಳು ಅಪಾಯಕರಿ ಸ್ಥಿತಿಯಲ್ಲಿದ್ದು ಸುಮಾರು 5 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಕಡಲ್ಕೊರೆತದ ಆರ್ಭಟದಿಂದಾಗಿ ಉಳ್ಳಾಲ ಭಾಗದ ಕಡಲ ತಡಿಯ ಜನರು ಆತಂಕದಿಂದ ದಿನದೂಡುವಂತಾಗಿದೆ.