'2019ರ ಲೋಕಸಭಾ ಚುನಾವಣೆ; ದೇಶಕ್ಕೆ ಮಾಡು-ಮಡಿ ಹೋರಾಟ'
ಉಡುಪಿ, ಜು.18: 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಹಾಗೂ ದೇಶಕ್ಕೆ ಮಾಡು-ಮಡಿ ಹೋರಾಟವಾಗಲಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರೇ ಮತ್ತೆ ಗೆದ್ದುಬಂದರೆ, 2024ರಲ್ಲಿ ನಾವು ಮತ್ತೆ ಈಗಿರುವ ರೀತಿಯ ಚುನಾವಣೆಯನ್ನು ನೋಡುವ ಸಾಧ್ಯತೆ ಇಲ್ಲ ಎಂದು ಎಐಸಿಸಿಯ ಕಾರ್ಯದರ್ಶಿ ಹಾಗೂ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ವಿಷ್ಣುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಅಂಬಲಪಾಡಿಯ ಹೊಟೇಲ್ ಕಾರ್ತಿಕ್ ಎಸ್ಟೇಟ್‌ನಲ್ಲಿ ಬುಧವಾರ ಪ್ರಾರಂಭಗೊಂಡ ಎರಡು ದಿನಗಳ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ಮೂರನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ಉತ್ತಮ ಕೆಲಸ ಮಾಡಿ, ಒಳ್ಳೆಯ ಆಡಳಿತ ನೀಡಿಯೂ ಬಯಸಿದಂಥ ಫಲಿತಾಂಶ ಬಂದಿಲ್ಲ. ಆದರೂ ನಾವು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದರಲ್ಲಿ ಯಶಸ್ವಿಯಾಗಿ ದ್ದೇವೆ. ದೇಶವೀಗ ಅತ್ಯಂತ ಸೂಕ್ಷ್ಮ ಹಂತದಲ್ಲಿ ಸಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಜಾತ್ಯತೀತ ನೆಲೆಯನ್ನು ರಕ್ಷಿಸಲು ‘ಮಾಡು-ಮಡಿ’ ಹೋರಾಟವನ್ನು ನಡೆಸಬೇಕಾಗಿದೆ ಎಂದರು.
ನರೇಂದ್ರ ಮೋದಿ ಅವರ ಮೀನುಗಾರರ, ರೈತರ, ಕಾರ್ಮಿಕರ, ಸಣ್ಣ ವ್ಯಾಪಾರಿಗಳ ವಿರುದ್ಧ ಧೋರಣೆಯನ್ನು, ಜನವಿರೋಧಿ ನೀತಿಯನ್ನು ಎದುರಿಸಿ ಹೋರಾಡಲೇ ಬೇಕಾಗಿದೆ. ದೇಶದ ಪ್ರಜಾಪ್ರಭುತ್ವದ ಅಳಿವು-ಉಳಿವು ಈ ಹೋರಾಟದಲ್ಲಿದೆ ಎಂದು ವಿಷ್ಣುನಾಥ್ ನುಡಿದರು.
ಮೊದಲ ಪ್ರಣಾಳಿಕೆ: ದೇಶದಲ್ಲಿ ಕಾಂಗ್ರೆಸ್ ಮಾತ್ರ ಸಮಾಜದ ಕಟ್ಟ ಕಡೆಯ ವ್ಯಕ್ತಿಯ, ಅಂಚಿನಲ್ಲಿರುವ ಹಾಗೂ ದುರ್ಬಲ ವರ್ಗದ ವ್ಯಕ್ತಿಗಳ ಪರವಾಗಿರುವ ಪಕ್ಷವಾಗಿದೆ. ದೇಶದಲ್ಲೇ ಮೀನುಗಾರರ ಪ್ರಣಾಳಿಕೆಯನ್ನು ತಯಾರಿಸಿದ ಮೊದಲ ರಾಜಕೀಯ ಪಕ್ಷ ಕಾಂಗ್ರೆಸ್ ಆಗಿರುವುದೇ ಸಾಕ್ಷಿ. ಈವರೆಗೆ ಯಾವುದೇ ರಾಜಕೀಯ ಪಕ್ಷ ಇಂಥ ಪ್ರಣಾಳಿಕೆ ರೂಪಿಸಿಲ್ಲ ಎಂದರು.
2019ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರಣಾಳಿಕೆಯನ್ನು ರೂಪಿಸಲಾಗಿದೆ. ಎರಡು ದಿನಗಳ ಈ ಸಭೆಯಲ್ಲಿ ಅಂತಿಮಗೊಳ್ಳುವ ಪ್ರಣಾಳಿಕೆಯ ಅಂಶಗಳು ಮುಂದಿನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರ್ಪಡೆ ಗೊಳ್ಳುತ್ತದೆ ಎಂದರು.
ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಟಿ.ಎನ್.ಪ್ರತಾಪನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಹಿರಿಯ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಎಐಸಿಸಿ ಸದಸ್ಯ ಅಮೃತ ಶೆಣೈ ಸಬೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪೀರು ಸಾಹೇಬ್, ಕಾರ್ಯದರ್ಶಿ ಕಿರಣ್‌ಕುಮಾರ್ ಉದ್ಯಾವರ, ರಾಜ್ಯ ಕಾರ್ಯದರ್ಶಿ ಉಪೇಂದ್ರ ಮೆಂಡನ್, ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮನೋಜ್ ಕರ್ಕೇರ,ಹರಿಯಪ್ಪ ಕೋಟ್ಯಾನ್, ಯಶೋಧರ ಉಪಸ್ಥಿತರಿದ್ದರು. ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಯು.ಆರ್.ಸಭಾಪತಿ ಅತಿಥಿಗಳನ್ನು ಸ್ವಾಗತಿಸಿದರು. ಎರಡು ದಿನಗಳ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸುಮಾರು 80ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ
ಉಡುಪಿಯಲ್ಲಿ ನಡೆದಿರುವ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ಮೂರನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾರತೀಯ ಮೀನುಗಾರರ ಪ್ರಣಾಳಿಕೆಯನ್ನು ಅಂತಿಮಗೊಳಿಸಲಾಯಿತು. ಇವುಗಳ ಕೆಲವು ಪ್ರಮುಖ ಅಂಶಗಳು ಹೀಗಿವೆ.
ದೇಶದ ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಸ್ವತಂತ್ರವಾದ ಮೀನುಗಾರಿಕಾ ಸಚಿವಾಲಯವನ್ನು ರಚಿಸಬೇಕು. *ಮೀನುಗಾರ ಸಮುದಾಯ ಎಂಬುದು ದೇಶಾದ್ಯಂತ ಏಕರೂಪದ ಸಮುದಾಯವಾಗಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಜಾತಿ-ವರ್ಗ ಗಳಲ್ಲಿ ಸೇರಿವೆ. ದೇಶದಲ್ಲಿ ಆದಿವಾಸಿ ಜನಾಂಗದ ಬಳಿಕ ಮೀನುಗಾರ ಸಮುದಾಯವೇ ಅತ್ಯಂತ ದುರ್ಬಲ ಸಮುದಾಯವಾಗಿದೆ. ಇವರ ಜೀವನ ವೃತ್ತಿ ಅತ್ಯಂತ ಅನಿಶ್ಚಿತವಾಗಿದೆ. ಹೀಗಾಗಿ ದೇಶದ ಎಲ್ಲಾ ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯವನ್ನು ಆಯಾ ರಾಜ್ಯಗಳ ಬೇಡಿಕೆಗನುಗುಣ ವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಲ್ಲಾ ಸೌಲಭ್ಯ ಗಳನ್ನು ನೀಡಬೇಕು.
*ಮೀನುಗಾರ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ- ಗತಿಯ ಕುರಿತು ಸಾಚಾರ್ ಕಮಿಷನ್‌ನಂಥ ಮಾದರಿ ಆಯೋಗವೊಂದನ್ನು ರಚಿಸಿ ವರದಿಯನ್ನು ತಯಾರಿಸಿ ಅನುಷ್ಠಾನಗೊಳಿಸಬೇಕು.
* ಮೀನುಗಾರರು ರಾಷ್ಟ್ರೀಕೃತ, ಶೆಡ್ಯೂಲ್ಡ್ ಬ್ಯಾಂಕ್‌ಗಳು, ಕೋಆಪರೇಟಿವ್ ಸೊಸೈಟಿ ಹಾಗೂ ಇತರ ಮಾನ್ಯತೆ ಪಡೆದ ಆರ್ಥಿಕ ಸಂಸ್ಥೆಗಳಿಂದ ಪಡೆದ ಸಾಲವನ್ನು ಮನ್ನಾ ಮಾಡುವ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು.
*ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಅಭಿವೃದ್ಧಿ ಮಂಡಳಿಯನ್ನು ರಚಿಸಬೇಕು. ಇದಕ್ಕನುಗುಣವಾಗಿ ರಾಜ್ಯ ಸರಕಾರಗಳೂ ಇದನ್ನು ತಮ್ಮ ರಾಜ್ಯಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು.