×
Ad

ಉಡುಪಿಯಲ್ಲಿ ಆಟಿಡೊಂಜಿ ದಿನ-ಮಹಿಳೆಯರ ಕೂಟ

Update: 2018-07-18 20:04 IST

ಉಡುಪಿ, ಜು.18: ಕೃಷಿ ಆಧಾರಿತ ಪ್ರದೇಶವಾಗಿರುವ ತುಳುನಾಡಿನಲ್ಲಿ ಜನರು ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದರು. ಆದುದರಿಂದ ಪೂರ್ವಜರು ಕಾಲಕ್ಕೆ ತಕ್ಕಂತೆ ಆಹಾರಗಳನ್ನು ಸೇವಿಸುತ್ತಿದ್ದರು. ಆದರೆ ಇಂದಿನ ಮಕ್ಕಳು ಎಲ್ಲ ಕಾಲಕ್ಕೂ ಜಂಕ್ ಫುಡ್‌ಗಳನ್ನು ತಿಂದು ಆರೋಗ್ಯವನ್ನೇ ಹಾಳು ಮಾಡಿಕೊಳ್ಳು ತ್ತಿದ್ದಾರೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ, ಬಂಟರ ಸಂಘ ಉಡುಪಿ, ತುಳುಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸ ಲಾದ ‘ಆಟಿಡೊಂಜಿ ದಿನ- ಪೊಂಜೆವೆನ ಕೂಟ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೊಬೈಲ್ ಆಟಗಳಿಂದ ಇಂದು ನಮ್ಮ ಮಕ್ಕಳು ಗ್ರಾಮೀಣ ಕ್ರೀಡೆಗಳನ್ನೇ ಮರೆತು ಬಿಟ್ಟಿದ್ದಾರೆ. ಇಂತಹ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಅವುಗಳನ್ನು ಮೆಲುಕು ಹಾಕಿ ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡುತ್ತಿವೆ. ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟಕ್ಕೆ ನಿವೇಶನ ನೀಡಿ ಕಟ್ಟಡ ಒದಗಿಸುವ ಕುರಿತು ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿ ಸುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು.

ಅಧ್ಯಕ್ಷತೆಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್ ವಹಿಸಿದ್ದರು. ತುಳು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಲಯನೆಸ್ ಮಾಜಿ ಜಿಲ್ಲಾ ಸಂಯೋಜಕಿ ನಿರುಪಮಾ ಪ್ರಸಾದ್ ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷೆ ರಾಧದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಬಂಟರ ಸಂಘದ ಕಾರ್ಯದರ್ಶಿ ಮೋಹನ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಚೆನ್ನೆಮಣೆ, ಜುಬಿಲಿ, ಪೊಕ್ಕ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಆಟಿಡೊಂಜಿ ದಿನಕ್ಕೆ ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ತಂದ ಮಹಿಳೆಯರನ್ನು ಗೌರವಿಸ ಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷೆ ಹಾಗೂ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ರವಿ ವಂದಿಸಿದರು. ಪ್ರಸನ್ನ ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದವರು ಆಟಿಯ ವಿಶೇಷ ಭೋಜನದಲ್ಲಿ ಅನ್ನ, ಹುರುಳಿ ಸಾರ್, ಮೂಡೆ, ಅರೆಪು ದಡ್ಯೆ, ಬಾಳೆಯ ಎಳೆಯ ಹಲಸಿನ ಹಣ್ಣಿನ ಗಟ್ಟಿ, ಉಪ್ಪಡ್ ಪಚ್ಚಿರ್ ಪದಾರ್ಥ, ಅರಸಿನ ಎಲೆಯ ಗಟ್ಟಿ, ಪತ್ರೊಡೆ, ಹಲಸಿನ ಹಣ್ಣಿನ ಮುಳ್ಕ, ಮೆಂತೆ ಪಾಯಸ, ಉಪ್ಪಿನ ಕಾಯಿ, ಮಜ್ಜಿಗೆ, ತೇವುದ ಚಟ್ನಿ, ಚಿಲಿಂಬಿದ ಅಡ್ಯ, ಮಾವಿನ ಕಾಯಿಯ ಚಟ್ನಿ, ನುಗ್ಗೆ ಸೊಪ್ಪಿನ ಪದಾರ್ಥ, ಕೆಂಡದಡ್ಯ, ನುಗ್ಗೆ ಸೊಪ್ಪಿನ ವಡೆ, ಕಣಿಲೆ ಪದೆಂಗಿ ಸೌತೆ ಗಸಿ, ತಿಮರೆದ ಚಟ್ನಿ, ಹಲಸಿನ ಪಚ್ಚಿರ್ ಸೇರಿದಂತೆ ವಿವಿಧ ಬಗೆಯ ವಿಶೇಷ ಖಾದ್ಯಗಳ ರುಚಿಯನ್ನು ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News