"ಬದುಕಲು ಮಳೆನೀರನ್ನು ಕುಡಿದೆವು, ದಾರಿ ಅಗೆಯಲು ಆರಂಭಿಸಿದೆವು"

Update: 2018-07-18 17:24 GMT

ಥಾಯ್ ಲ್ಯಾಂಡ್, ಜು.18: ಥಾಯ್ ಲ್ಯಾಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಹಾಗು ಕೋಚ್ ನ ರಕ್ಷಣಾ ಕಾರ್ಯದ ಕಡೆಗೆ ಇಡೀ ವಿಶ್ವವೇ ತಿರುಗಿ ನೋಡಿತ್ತು. ಗುಹೆಯೊಳಗಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬರಬೇಕೆಂದು ಎಲ್ಲಾ ಧರ್ಮಗಳ ಜನರು ಜಗತ್ತಿನಾದ್ಯಂತ ಪ್ರಾರ್ಥಿಸಿದ್ದರು.

ಇದೀಗ ಗುಹೆಯಿಂದ ಸುರಕ್ಷಿತವಾಗಿ ಹೊರಬಂದ ಮಕ್ಕಳು ಆಸ್ಪತ್ರೆಯಿಂದಲೂ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮಾತನಾಡುವ ಒಬ್ಬ ಬಾಲಕ ರಕ್ಷಣಾ ತಂಡಕ್ಕೆ ನಾವು ಸಿಕ್ಕಿದ ಆ ಕ್ಷಣ 'ಪವಾಡ'ದಂತಿತ್ತು ಎನ್ನುತ್ತಾನೆ.

"ರಕ್ಷಣಾ ತಂಡಕ್ಕೆ ಕಾದುಕುಳಿತರೆ ನಾವು ಹೊರಕ್ಕೆ ಹೋಗುವುದು ಅಸಾಧ್ಯ ಎಂದು ತಿಳಿದ ನಂತರ ನಾವೇ ದಾರಿಯನ್ನು ಅಗೆಯಲು ಆರಂಭಿಸಿದ್ದೆವು" ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಎಕ್ಕಪೋಲ್ ಚಂಟವೋಂಗ್ ಹೇಳುತ್ತಾರೆ. "ಬದುಕುವುದಕ್ಕಾಗಿ ಬಂಡೆಯಿಂದ ಬೀಳುತ್ತಿದ್ದ ಮಳೆ ನೀರನ್ನೂ ಕುಡಿದಿದ್ದೇವೆ" ಎಂದು ಓರ್ವ ಬಾಲಕ ಹೇಳಿದ್ದಾನೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಾಲಕರನ್ನು ಸಂಬಂಧಿಕರು, ಗೆಳೆಯರು ಸ್ವಾಗತಿಸಿದರು. ಥಾಯ್ ನಗರಾದ್ಯಂತ "ಬ್ರಿಂಗಿಂಗ್ ದ ವೈಲ್ಡ್ ಬೋರ್ಸ್ ಹೋಮ್" ಎನ್ನುವ ಬ್ಯಾನರ್ ಗಳನ್ನು ಹಾಕಲಾಗಿದೆ (ವೈಲ್ಡ್ ಬೋರ್ಸ್ ಎನ್ನುವುದು ಬಾಲಕರ ತಂಡದ ಹೆಸರು).

ನಿಯಂತ್ರಿತ ಪರಿಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ!

ಅನುಚಿತ ಪ್ರಶ್ನೆಗಳು 18 ದಿನಗಳ ಗುಹೆ ವಾಸದಿಂದ ಈಗಾಗಲೇ ಒತ್ತಡಕ್ಕೆ ಸಿಲುಕಿರುವ ಬಾಲಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದಾಗಿ ಪರಿಣತರು ಎಚ್ಚರಿಸಿರುವ ಹಿನ್ನೆಲೆಯಲ್ಲಿ, ಅತ್ಯಂತ ನಿಯಂತ್ರಿತ ಪರಿಸ್ಥಿತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ಪ್ರಶ್ನೆಗಳನ್ನು ಮೊದಲೇ ಕಳುಹಿಸಿಕೊಡುವಂತೆ ಪತ್ರಕರ್ತರಿಗೆ ಸೂಚಿಸಲಾಗಿತ್ತು.

ಅದೂ ಅಲ್ಲದೆ, ಇನ್ನು ಕನಿಷ್ಠ ಒಂದು ತಿಂಗಳವರೆಗೆ ಬಾಲಕರು ಪತ್ರಕರ್ತರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವಂತೆ ಹೆತ್ತವರಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News