×
Ad

ಭಟ್ಕಳ: ಹೊನ್ನೆಗದ್ದೆಯಲ್ಲಿ ಸಮುದ್ರ ಕೊರೆತ; ಗ್ರಾಮಸ್ಥರಲ್ಲಿ ಆತಂಕ

Update: 2018-07-18 20:13 IST

ಭಟ್ಕಳ, ಜು. 18: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನೆಗದ್ದೆಯಲ್ಲಿ ಉಂಟಾದ ಸಮುದ್ರ ಕೊರೆತದಿಂದಾಗಿ ಆ ಭಾಗದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಕಳೆದ ಒಂದು ತಿಂಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಸಮುದ್ರದಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದು ಸಮುದ್ರ ತಟದಲ್ಲಿ ವಾಸಿಸುತ್ತಿರುವವರು ಆತಂಕದಲ್ಲಿ ದಿನವನ್ನು ಕಳೆಯುವಂತಾಗಿದೆ.

ಹೊನ್ನೆಗದ್ದೆ ಭಾಗದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದ್ದು ಮಳೆಗಾಲದಲ್ಲಿ ಆತಂಕದ ಕ್ಷಣವನ್ನು ಎದುರಿಸುತ್ತಲೆ ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ರಾತ್ರಿಯನ್ನು ಕಳೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಈ ಬಾರಿ ಬಿದ್ದ ಮಳೆಯು ಹಿಂದಿನ ವರ್ಷದ ಎಲ್ಲ ದಾಖಲೆಯನ್ನು ಹಿಂದಿಕ್ಕಿದ್ದು ಗ್ರಾಮಸ್ಥರ ಸಮಸ್ಯೆಯನ್ನು ಇಮ್ಮಡಿಗೊಳಿಸಿದೆ ಎಂದು ಗ್ರಾಮದ ಮುಖಂಡರು ಹೇಳುತ್ತಿದ್ದಾರೆ.

ಕಳೆದ ವರ್ಷ ಸರ್ಕಾರ ಲಕ್ಷಾಂತರ ರೂ ವ್ಯಯಿಸಿ ಸಮುದ್ರ ತಡೆಗೋಡೆಯನ್ನು ನಿರ್ಮಿಸಿದ್ದರು. ಆದರೆ ಕೆಲವು ಕಡೆಗಳಲ್ಲಿ ತಡೆಗೋಡೆಯನ್ನು ದಾಟಿ ಸಮುದ್ರದಲೆಗಳು ಅಪ್ಪಳಿಸಿ ವಸತಿ ಪ್ರದೇಶಕ್ಕೆ ನುಗುತ್ತಿದೆ. ತಡೆಗೋಡೆಯನ್ನೂ ದಾಟಿ ಬರುವ ಸಮುದ್ರದ ಅಲೆಗಳು ಡಾಂಬರು ರಸ್ತೆಯನ್ನು ಲೆಕ್ಕಿಸಲು ಎಲ್ಲವನ್ನು ತನ್ನೊಡಲಕ್ಕೆ ಸೆಳೆದುಕೊಳ್ಳುತ್ತಿದೆ. ಸಮುದ್ರಗೋಡೆಗಳನ್ನು ಇನ್ನಷ್ಟು ಎತ್ತರಕ್ಕೆ ನಿರ್ಮಿಸಬೇಕು ಹಾಗೂ ಆದಷ್ಟು ಅದನ್ನು ಸದೃಢವಾಗಿರುವಂತೆ ನೋಡಿಕೊಳ್ಳಬೇಕು, ಗ್ರಾಮಸ್ಥರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಸ್ಥಳಿಯರು ತಾಲೂಕಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಭಟ್ಕಳ ತಹಶೀಲ್ದಾರ್ ವಿ.ಎನ್.ಬಾಡ್ಕರ್ ಸಮುದ್ರದಲೆಗಳ ಪ್ರಭಾವಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಮೇಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಸಂಪೂರ್ಣ ವರದಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮುದ್ರ ಕೊರೆತವನ್ನು ತಡೆಯಲು ಅಗತ್ಯ ಕ್ರಮ ಜರಗಿಸುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News