ಜಾಲಿ ಪ.ಪಂ ಅಧ್ಯಕ್ಷರಾಗಿ ಆದಂ ಪಣಂಬೂರು ಸರ್ವಾನುಮತದಿಂದ ಆಯ್ಕೆ

Update: 2018-07-18 15:20 GMT

ಭಟ್ಕಳ, ಜು. 18: ಅಬ್ದುಲ್ ರಹೀಮ್ ಶೇಖ್ ರಾಜಿನಾಮೆ ನೀಡುವುದರೊಂದಿಗೆ ತೆರವುಗೊಂಡಿದ್ದ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ತಂಝೀಮ್ ಬೆಂಬಲಿತ ಅಭ್ಯರ್ಥಿ ಸೈಯ್ಯದ್ ಆದಂ ಪಣಂಬೂರು ಮುಂದಿನ ಎಂಟು ತಿಂಗಳ ಅವಧಿಗೆ ಸರ್ವಾನುಮತದೊಂದಿಗೆ ಆಯ್ಕೆಗೊಂಡಿದ್ದಾರೆ.

ಕಳೆದ ಒಂದುವರೆ ತಿಂಗಳಿನಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನವಣೆ ನಿಗದಿಯಾಗಿತ್ತು. ತಂಝೀಮ್ ಬೆಂಬಲಿತ 12 ಸದಸ್ಯರು, ಕಾಂಗ್ರೆಸ್ ಬೆಂಬಲಿತ 5 ಹಾಗೂ ಬಿಜೆಪಿ ಬೆಂಬಲಿತ 3 ಮಂದಿ ಒಟ್ಟು 20 ಮಂದಿ ಸದಸ್ಯರ ನೂತನ ಜಾಲಿ ಪಟ್ಟಣ ಪಂಚಾಯತ್ ಗೆ ತಂಝೀಮ್ ಸಂಸ್ಥೆಯನ್ನು ಎದುರು ಹಾಕಿಕೊಂಡು ಆಗಿನ ಶಾಸಕ ಮಾಂಕಾಳ್ ವೈದ್ಯರ ಬೆಂಬಲದೊಂದಿಗ ಅಬ್ದುಲ್ ರಹೀಮ್ ಶೇಖ್ ಅಧ್ಯಕ್ಷ ಗಾದಿಯನ್ನು ಏರಿದ್ದರು. ವಿಧಾನಸಭಾ ಚುನಾವಣೆಯ ನಂತರ ವೈಯಕ್ತಿಕ ಕಾರಣ ನೀಡಿ ಅಬ್ದುಲ್ ರಹೀಂ ಶೇಖ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಹಿಂದೆ ರಾಜಕೀಯ ಒತ್ತಡವಿತ್ತು ಎಂದು ಹೇಳಲಾಗುತ್ತಿದ್ದರು ತನ್ನ ವ್ಯಯಕ್ತಿಕ ಕಾರಣವೇ ರಾಜಿನಾಮೆ ನೀಡಲು ಪ್ರಮುಖ ಕಾರಣ ಎಂದು ರಹೀಂ ಸ್ಪಷ್ಟನೆ ನೀಡಿದ್ದರು.

ಅಂದಿನಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನವನ್ನು ಸೈಯ್ಯದ್ ಆದಂ ರನ್ನು ಬೆಂಬಲಿಸಿ ಗೆಲ್ಲಿಸುವುದರ ಮೂಲಕ ತಂಝೀಮ್ ಸಂಸ್ಥೆ ಪಂಚಾಯತ್ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News