ದೇರಳಕಟ್ಟೆ: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಉಳ್ಳಾಲ, ಜು. 18: ರಕ್ತ ಕ್ಯಾನ್ಸರ್ (ಮಲ್ಟಿಪಲ್ ಮೈಲೋಮಾ)ದಿಂದ ಬಳಲುತ್ತಿದ್ದ ಐವತ್ತೈದು ವರ್ಷ ವಯಸ್ಸಿನ ರೋಗಿಗೆ ಯಶಸ್ವಿ ಅಸ್ಥಿಮಜ್ಜೆ ಕಸಿ ವಿಧಾನವನ್ನು ಪ್ರಥಮ ಬಾರಿಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲೀಲಾ ನಾರಾಯಣ ಶೆಟ್ಟಿ ಕ್ಯಾನ್ಸರ್ ಕೇಂದ್ರದ ಮೆಡಿಕಲ್ ಆಂಕೊಲಾಜಿ ತಜ್ಞ ಡಾ ವಿಜೀತ್ ಶೆಟ್ಟಿ ಹಾಗೂ ಅವರ ನೇತೃತ್ವದ ವೈದ್ಯಕೀಯ ತಂಡ ಈ ಯಶಸ್ವಿ ಅಟೋಲೋಜಸ್ ಕಾಂಡಕೋಶ ಕಸಿ ವಿಧಾನವನ್ನು ರೋಗಿಗೆ ನಡೆಸಿತು.
ಬೆಳ್ತಂಗಡಿ ತಾಲೂಕಿನ 55 ವರ್ಷ ವಯಸ್ಸಿನ ಜಯಂತ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಮೂರು ವರ್ಷದಿಂದ ತೀವ್ರ ಬೆನ್ನುನೋವು ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದು, ಅವರ ಖಾಯಿಲೆ ಕುರಿತಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹಲವು ಬಾರಿ ತಪಾಸಣೆ ನಡೆಸಿದಾಗ ಅವರಿಗೆ ರಕ್ತ ಕ್ಯಾನ್ಸರ್(ಮಲ್ಟಿಪಲ್ ಮೈಲೋಮಾ) ಕಾಯಿಲೆ ಇರುವುದಾಗಿ ಪತ್ತೆಯಾಯಿತು. ಮಲ್ಟಿಪಲ್ ಮೈಲೋಮಾ ಎಂಬುದು ಒಂದು ವಿಧದ ರಕ್ತ ಕ್ಯಾನ್ಸರ್ ಕಾಯಿಲೆಯಾಗಿದ್ದು, ಅದರಲ್ಲಿ ವಿಲಕ್ಷಣ ಪ್ಲಾಸ್ಮ ಕೋಶಗಳ ಅಸಹಜ ಬೆಳವಣಿಗೆಯಾಗಿ ಮೂಳೆ ಮಜ್ಜೆಯ ರಕ್ತದ ಉತ್ಪಾದನೆಯಲ್ಲಿ ಏರುಪೇರಾಗುತ್ತದೆ. ಈ ಕಾಯಿಲೆಗೆ ಕ್ಲಪ್ತಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ರಕ್ತ ಹೀನತೆ, ಮೂತ್ರಪಿಂಡ ವೈಫಲ್ಯ ಮತ್ತು ಮೂಳೆಗಳ ಮುರಿತಕ್ಕೆ ಕಾರಣವಾಗುತ್ತದೆ.
ಅಟೊಲೋಗಸ್ ಎಂಬುದು ಮಲ್ಟಿಪಲ್ ಮೈಲೋಮಾ ಕಾಯಿಲೆಗೆ ಸುಧಾರಿತ ಚಿಕಿತ್ಸಾ ಕಾರ್ಯ ವಿಧಾನವಾಗಿದ್ದು, ರೋಗಿಗಳ ಕಾಯಿಲೆ ಉಲ್ಬಣವಾಗದಂತೆ ಜೀವಿತಾ ವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಅಟೊಲೋಗಸ್ ಕಾರ್ಯ ವಿಧಾನದಲ್ಲಿ ಮೊದಲ ಹಂತದಲ್ಲಿ ಬಾಹ್ಯ ರಕ್ತದ ಪೆರಿಫೆರಲ್ ಕಾಂಡಕೋಶಗಳನ್ನು ಸಂಗ್ರಹಿಸುವುದು, ಎರಡನೆ ಹಂತದಲ್ಲಿ ರೋಗಿಯಲ್ಲಿನ ಮಾರಣಾಂತಿಕ ಕೋಶಗಳನ್ನು ನಿರ್ಮೂಲನೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಕೀಮೊ ಥೆರಪಿ ಚಿಕಿತ್ಸೆಗೆ ಒಳಗಾಗಿಸುವುದು ಹಾಗೂ ಮೂರನೇ ಹಂತದಲ್ಲಿ ರೋಗಿಯಲ್ಲಿನ ಮಾರಣಾಂತಿಕ ಕೋಶಗಳು ಮತ್ತೆ ಸಾಮಾನ್ಯ ಕೋಶಗಳಾಗಿ ಪರಿವರ್ತಿಸುವಂತೆ ನೋಡಿಕೊಳ್ಳಲಾಗುತ್ತದೆ.
ನಿಟ್ಟೆ ವಿವಿ ಸಹ ಕುಲಾಧಿಪತಿ ಪ್ರೊ ಡಾ ಎಂ. ಶಾಂತರಾಮ ಶೆಟ್ಟಿ ಮಾತನಾಡಿ ಇಂತಹ ಸುಧಾರಿತ ಕಾರ್ಯ ವಿಧಾನ ಬೆಂಗಳೂರಿನ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈಗ ನಮ್ಮ ಆಸ್ಪತ್ರೆಯಲ್ಲಿಯೂ ಇಂತಹ ಸುಧಾರಿತ ಚಿಕಿತ್ಸಾ ವಿಧಾನ ಕಂಡುಹಿಡಿದಿರುವುದು ಶ್ಲಾಘನೀಯ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಡಾ ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಐವತ್ತರ ನಂತರ ರೋಗಿಗೆ ಚಿಕಿತ್ಸೆ ನೀಡುವುದು ಸ್ವಲ್ಪ ಕಠಿಣವಾಗಿದ್ದು, ಆದರೆ ನಮ್ಮ ಮೆಡಿಕಲ್ ಆಂಕೋಲಾಜಿ ವಿಭಾಗ ಅದನ್ನು ಸವಾಲಾಗಿ ತೆಗೆದುಕೊಂಡು, ಆ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಗೆ ಸಮಾಧಾನಕರ ಪರಿಹಾರ ಒದಗಿಸಿದೆ ಎಂದರು.
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ ಡಾ ಪಿ.ಎಸ್. ಪ್ರಕಾಶ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅೀಕ್ಷಕ ಮೇಜರ್ ಡಾ ಶಿವಕುಮಾರ್ ಹಿರೇಮಠ್, ನಿರ್ವಹಣೆ ವೈಸ್‌ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಕ್ಷೇಮದ ರೇಡಿಯೇಷನ್ ಅಂಕೊಲಾಜಿಯ ಮುಖ್ಯಸ್ಥ ಪ್ರೊ ಡಾ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.