ಮೀನುಗಾರರಿಗೆ ಡೆಲಿವರಿ ಪಾಯಿಂಟ್‌ನಲ್ಲಿ ಡೀಸೆಲ್: ಸಚಿವ ನಾಡಗೌಡ
ಮಲ್ಪೆ, ಜು.18: ಯಾಂತ್ರಿಕ ಮೀನುಗಾರಿಕೆ ದೋಣಿಗಳಿಗೆ ಈ ಹಿಂದೆ ಡೆಲಿವರಿ ಪಾಯಿಂಟ್‌ನಲ್ಲಿ ನೀಡುತ್ತಿದ್ದ ಮಾರಾಟ ತೆರಿಗೆ ರಹಿತ ಡೀಸೆಲ್‌ನ್ನು ಈಗ ಯಾವ ಕಾರಣಕ್ಕೆ ಬದಲಾವಣೆಗೊಳಿಸಲಾಗಿದೆ ಎಂಬುವುದರ ಬಗ್ಗೆ ಇಲಾಖೆಯ ಕಾರ್ಯದರ್ಶಿಗಳ ಜತೆಯಲ್ಲಿ ಚರ್ಚಿಸಿ, ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಿಂದಿನಂತೆ ಡೆಲಿವರಿ ಪಾಯಿಂಟ್ ನಲ್ಲಿಯೇ ತೆರಿಗೆ ರಹಿತ ಡೀಸೆಲ್ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಬಳಿಕ ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳ ಮನವಿಯನು್ನ ಸ್ವೀಕರಿಸಿ ಅವರು ಮಾತನಾಡಿದರು.
ಮಲ್ಪೆಬಾಪುತೋಟದ ಬಳಿಇರುವ ಸ್ಲೀಪ್‌ವೇ ನಿರ್ವಹಣೆ ಮಾಡುವ ಬಗ್ಗೆ ಕಡತಗಳನ್ನು ಪರಿಶೀಲನೆ ನಡೆಸಿ ಮೀನುಗಾರ ಸಂಘಕ್ಕೆ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು. ಬಡ ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತವಾಗಿ 50ಸಾವಿರ ರೂ.ವರೆಗೆ ಸಾಲ ನೀಡುವ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಇದನ್ನು ಗುಂಪಿಗೆ ಅಥವಾ ವೈಯಕ್ತಿಕವಾಗಿ ಕೊಡುವ ಬಗ್ಗೆ ತಮ್ಮ ಸಲಹೆ ಮೇರೆಗೆ ನಿರ್ಧರಿಸಲಾಗುತ್ತದೆ. ಕುಮಾರಸ್ವಾಮಿ ಸರಕಾರ ಬಡವರ,ಮೀನುಗಾರರ ಪರವಾಗಿದ್ದು ಮೀನುಗಾರರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಒಮ್ಮೆಲೆ ಸೀಮೆಎಣ್ಣೆಯ ಸಮಸ್ಯೆ ಎದುರಾದರೆ ಮೀನುಗಾರರಿಕೆ ಸಮಸ್ಯೆ ಉಂಟಾಗಬಾರದು ಎಂಬ ನೆಲೆಯಲ್ಲಿ ಬದಲಿ ವ್ಯವಸ್ಥೆಯಾಗಿ ಎಲೆಕ್ಟ್ರಿಕ್ ದೋಣಿಗಳನ್ನು ಪ್ರಾಯೋಗಿಕವಾಗಿ ಸಿದ್ದಪಡಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ನಿರ್ಧಾರವನ್ನು ತೆಗೆದುಕೊಳ್ಳ ಲಾಗುತ್ತದೆ. ಆಲ್ಲಿಯವರೆಗೆ ಮೀನುಗಾರರಿಗೆ ಸೀಮೆಎಣ್ಣೆಯ ಸಮಸ್ಯೆ ಆಗದು ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಮೀನುಗಾರರಿಗೆ ಕೊಡುವ ಡೀಸೆಲ್ ಪ್ರಮಾಣವನ್ನು ವಾರ್ಷಿಕ 1.5 ಲಕ್ಷ ಕಿ. ಲೀಟರ್‌ನಿಂದ 2 ಲಕ್ಷ ಕಿ.ಲೀ.ಗೆ ಏರಿಸುವ ಬಗ್ಗೆ, ಸಾಲ ಮನ್ನಾ ಯೋಜನೆಯನ್ನು ಮೀನುಗಾರರಿಗೂ ನೀಡುವಂತೆ, ಮೀನುಗಾರ ಮಹಿಳೆಯರಿಗೆ ನೀಡುವ ಒಂದು ಲಕ್ಷ ರೂ. ವರೆಗಿನ ಸಾಲವನ್ನು ಬಡ್ಡಿ ರಹಿತವಾಗಿ ನೀಡುವಂತೆ, ಒಣಮೀನು ಮಾರಾಟಗಾರರಿಗೆ ಜಾಗ ಒದಗಿಸುವುದು ಸೇರಿದಂತೆ ಮೀನುಗಾರರ ವಿವಿಧ ಸಮಸ್ಯೆ, ಬೇಡಿಕೆಗಳ ಕುರಿತು ಸಚಿವರ ಗಮನ ಸೆಳೆದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ವಿವಿಧ ಮೀನುಗಾರಿಕಾ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರಿಕಾ ನಿರ್ದೇಶಕ ಹೆಚ್. ಎಸ್. ವೀರಪ್ಪ ಗೌಡ, ಜಂಟಿ ನಿರ್ದೇಶಕ ದೊಡ್ಡಮನಿ, ಉಪ ನಿರ್ದೇಶಕ ಪಾರ್ಶ್ವನಾಥ್, ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ, ಮಲ್ಪೆಯ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.