ಉಚ್ಚ, ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಸಲು ಸರಕಾರ ಚಿಂತನೆ

Update: 2018-07-18 17:45 GMT

ಹೊಸದಿಲ್ಲಿ, ಜು.18: ಉನ್ನತ ನ್ಯಾಯಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರುಗಳ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸರಕಾರಿ ಅಧಿಕಾರಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿಯ ವಯಸ್ಸನ್ನು ಈಗಿರುವ 65ರಿಂದ 67ಕ್ಕೆ ಏರಿಸಲು ಯೋಚಿಸಲಾಗಿದ್ದರೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೇರಿಸುವ ಯೋಚನೆಯಿದೆ ಎಂದು ತಿಳಿಸಿದ್ದಾರೆ. ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿದೆ. ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಎದುರಾಗಿರುವ ಕಾರಣ ಈ ತಿದ್ದುಪಡಿಯನ್ನು ಮಾಡುವುದು ಅನಿವಾರ್ಯ ಎಂದು ಸರಕಾರ ತಿಳಿಸಿದೆ.

ಬುಧವಾರ ಆರಂಭವಾಗಿರುವ ಸಂಸತ್‌ನ ಮಾನ್ಸೂನ್ ಅಧಿವೇಶನದಲ್ಲಿ ಮಸೂದೆಗೆ ಅಗತ್ಯವಿರುವ ತಿದ್ದುಪಡಿಯನ್ನು ತರಲು ಸರಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉನ್ನತ ನ್ಯಾಯ ವ್ಯವಸ್ಥೆಯಲ್ಲಿ ಉಂಟಾಗಿರುವ ನ್ಯಾಯಾಧೀಶರ ಕೊರತೆಯನ್ನು ಸರಿದೂಗಿಸಲು ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಸಂಸದೀಯ ಸಮಿತಿ ಸರಕಾರಕ್ಕೆ ಮನವಿ ಮಾಡಿತ್ತು. ಸದ್ಯ ವಿಚಾರಣೆಗೆ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಸದ್ಯ ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಭವಿಷ್ಯದಲ್ಲಿ ಖಾಲಿಯಾಗುವ ಹುದ್ದೆಗಳಿಗೆ ಸರ್ವೋಚ್ಚ ನ್ಯಾಯಾಲಯ 1993ರ ಆದೇಶದಂತೆ ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸುವ ಮೂಲಕ ನೇಮಕ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News