ಸ್ವಾಮೀ ಅಗ್ನಿವೇಶ ಮೇಲೆ ದಾಳಿ ನೀಚ ಹೇಡಿಗಳ ಕೃತ್ಯ: ಬಿ.ಎಂ.ಭಟ್
ಬೆಳ್ತಂಗಡಿ, ಜು. 18: ಸುಮಾರು 80 ವರ್ಷ ಪ್ರಾಯದ ಸ್ವಾಮೀ ಅಗ್ನಿವೇಶರ ಮೇಲೆ ಜಾರ್ಖಂಡಲ್ಲಿ ದಾಳಿ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ನೀಚ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹಿರಿಯ ಕಮ್ಯೂನಿಷ್ಟ್ ಮುಂದಾಳು ನ್ಯಾಯವಾದಿ ಬಿ.ಎಂ. ಭಟ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಸಂಘ ಪರಿವಾರವಾಗಲಿ, ಇನ್ಯಾವ ಮತಾಂಧ ಶಕ್ತಿಗಳೇ ಆಗಲಿ ಜನರಿಗೆ ಮತಾಂಧತೆ, ಕೋಮು ಭಾವನೆ ಬೆಳೆಸಿದರೆ ಮತ್ತೆ ಅವರು ಯಾರ ಹಿಡಿತಕ್ಕೂ ಸಿಗದ ಕ್ರಿಮಿನಲು ಗಳಾಗುತ್ತಾರೆ. ಭಯೋತ್ಪಾದಕರಾಗುತ್ತಾರೆ ಎಂಬುದಕ್ಕೆ ಇದೇ ನಿದರ್ಶನ. ಸಮಾಜ ಸೇವಕರು, ರಾಜಕಾರಣಿಗಳು ಸಮಾಜದಲ್ಲಿ ಮಾನವೀಯತೆ, ಪ್ರೀತಿ, ವಿಶ್ವಾಸ, ಸಮಾನತೆ ಸಾರಬೇಕಾದವರಾಗಿರಬೇಕಿದ್ದರೂ, ಇಂದು ಮಾನವ ಸಮಾಜದ ನಾಶಕರನ್ನು, ಸಮಾಜವನ್ನು ಒಡೆಯುವಂತಹವರನ್ನೂ ತಯಾರು ಮಾಡುವಂತಾಗಿದೆ ಎಂದರು.
ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಆಡಳಿತದ ವಿರುದ್ಧ , ಬೆಲೆ ಏರಿಕೆ ವಿರುದ್ಧ ಸ್ವರ ಎತ್ತದ ಈ ನೀಚ ಗುಂಪುಗಳು ಅಮಾಯಕರ ಮೇಲೆ ಹಲ್ಲೆ ನಡೆಸಿ ಸಮರ್ಥನೆ ನೀಡುತ್ತಾ ಕಾನೂನನ್ನೇ ಕೈಗೆತ್ತಿಕೊಳ್ಳುತ್ತಿವೆ. ಇವರ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೂ ಸಾಧ್ಯವಾಗದಿರುವುದು ನಮ್ಮ ದೇಶದ ದುರಂತ. ಸರ್ವೋಚ್ಚ ನ್ಯಾಯಾಲಯ ನೀಡಿದ ಸಲಹೆಯಂತೆ ಗುಂಪು ದಾಳಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಯಾರಿಸಿ ಇಂತಹ ಭಯೋತ್ಪಾದನೆಯನ್ನು ತಡೆ ಗಟ್ಟಬೇಕಾಗಿದೆ. ಸಹೃದಯಿ, ಸಮಾಜ ಪ್ರೇಮಿ, ಮಾನವ ಪ್ರೇಮಿ ಹಾಗೂ ನೈಜ ದೇಶ ಭಕ್ತರೆಲ್ಲಾ ಒಟ್ಟಾಗಿ ಇಂತಹ ಕೆಟ್ಟ ದಾಳಿಗರ ವಿರುದ್ಧ ಹೋರಾಟ ನಡೆಸಲು ತಯಾರಾಗಬೇಕಾಗಿದೆ ಎಂದು ಬಿ.ಎಂ.ಭಟ್ ಹೇಳಿದರು.